ಕೆ.ಆರ್.ಪುರ (ಬೆಂಗಳೂರು):ಮುಂಬೈನ ದಾದರ್ ಪ್ರದೇಶದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಮನೆ 'ರಾಜಗೃಹ'ದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿರುವುದನ್ನು ಖಂಡಿಸಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ಬೆಂಗಳೂರು ಪೂರ್ವ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರ್ 'ರಾಜಗೃಹ'ದ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ - ಡಾ.ಬಿ.ಆರ್.ಅಂಬೇಡ್ಕರ್ ಮನೆ ಮೇಲೆ ದಾಳಿ
ಮುಂಬೈನ ದಾದರ್ ಪ್ರದೇಶದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಮನೆ 'ರಾಜಗೃಹ'ದ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ದಲಿತ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಸೋರುಣಸೆ ವೆಂಕಟೇಶ್, ಭಾರತ ಸ್ವಾತಂತ್ರ್ಯ ಪಡೆದ ನಂತರ ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನವನ್ನು ನೀಡಿ, ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾದ ಹಕ್ಕನ್ನು ನೀಡಿದ್ದಾರೆ. ದೇಶದ ಬಹುಸಂಖ್ಯಾತ ಅಸ್ಪೃಶ್ಯರು, ಧಾರ್ಮಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಎಲ್ಲಾ ರೀತಿಯ ಕಾನೂನನ್ನ ಸಂವಿಧಾನದಲ್ಲಿ ಅಳವಡಿಸಿದ್ದಾರೆ.
ಆದರೆ, ಮನುವಾದಿಗಳು ಅವರಿಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಶೂದ್ರರು, ಅಸ್ಪೃಶ್ಯರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಒಂದಲ್ಲ ಒಂದು ರೀತಿ ಹಲ್ಲೆ ಮಾಡುತ್ತಾ ಬಂದಿದ್ದಾರೆ. ಈ ಕೃತ್ಯದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದ್ದು, ಇದು ಬಾಬಾ ಸಾಹೇಬರಿಗೆ ಮಾಡಿರುವ ಅಪಮಾನವಾಗಿರುತ್ತದೆ. ಹೀಗಾಗಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.