ಬೆಂಗಳೂರು: ರಾಜ್ಯದಲ್ಲಿಂದು 7,908 ಜನ ಸೋಂಕಿತರು ಪತ್ತೆಯಾಗಿದ್ದಾರೆ. 5,257 ಮಂದಿ ಗುಣಮುಖರಾಗಿದ್ದು, ಈವರೆಗೆ 1,26,499 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ 2,11,108 ದೃಢಗೊಂಡ ಕೋವಿಡ್ ಪ್ರಕರಣಗಳ ಪೈಕಿ 80,883 ಸಕ್ರಿಯ ಪ್ರಕರಣಗಳಿವೆ.
ಈ ತಿಂಗಳಿನಲ್ಲಿ ಮೂರನೇ ಬಾರಿಗೆ ಸೋಂಕಿತರ ಸಂಖ್ಯೆ 7 ಸಾವಿರದ ಗಡಿ ದಾಟಿದೆ. ಆಗಸ್ಟ್ 8 ರಂದು 7,178, 12 ರಂದು 7,883 ಸೋಂಕಿತರು ಪತ್ತೆಯಾಗಿದ್ದರು.
ಕೋವಿಡ್‌ಗೆ ಬಲಿಯಾದವರ ಸಂಖ್ಯೆ:
104 ಮಂದಿ ಚಿಕಿತ್ಸೆ ಫಲಿಸದೇ ಇಂದು ಮೃತರಾಗಿದ್ದು ಇಲ್ಲಿಯವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 3,717ಕ್ಕೆ ಏರಿದೆ.
ರಾಜ್ಯದಲ್ಲಿ ಚೇತರಿಕೆ, ಮರಣ ಪ್ರಮಾಣ:
ರಾಜ್ಯದಲ್ಲಿ ಚೇತರಿಕೆ ಪ್ರಮಾಣ 59.92% ರಷ್ಟಿದ್ದರೆ, ಶೇ 1.76 ಮರಣ ಪ್ರಮಾಣವಿದೆ.
ರಾಜ್ಯದಲ್ಲಿಂದು 56,638 ಜನರ ಸ್ವಾಬ್ ಪರೀಕ್ಷೆ ನಡೆಸಿದ್ದು, ಈವರೆಗೆ 19,38,954 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.
ಸರ್ಕಾರಿ ಕೋಟಾದಡಿ ದಾಖಲಾಗುವ ಸೋಂಕಿತರಿಗೆ ರೆಮಿಡೆಸಿವಿರ್ ಔಷಧ:
ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ದಾಖಲಾಗಿ ಚಿಕಿತ್ಸೆ ಪಡೆಯುವ ಸೋಂಕಿತರಿಗೂ ರೆಮಿಡೆಸಿವಿರ್ ಔಷಧ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ಈ ಔಷಧವನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತಿತ್ತು. ಇದರಿಂದ ಉತ್ತಮ ಫಲಿತಾಂಶ ಲಭ್ಯವಾದ ಹಿನ್ನೆಲೆಯಲ್ಲಿ, ಸೌಲಭ್ಯವನ್ನು ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ನೀಡುವಂತೆ ಸೂಚನೆ ನೀಡಲಾಗಿದೆ.
ರೆಮಿಡೆಸಿವಿರ್ ಇಂಜೆಕ್ಷನ್ ಎಷ್ಟು ಅಗತ್ಯ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪರಿಶೀಲಿಸಿ ಬಳಿಕ ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಗೆ ಔಷಧಿ ವಿತರಿಸುವಂತೆ ಸೂಚಿಸಲಾಗಿದೆ. ಇಂಜೆಕ್ಷನ್ ಬಳಸುವಾಗ ಜಿಲ್ಲಾ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಯ ಮಾಹಿತಿಯನ್ನು ಸೊಸೈಟಿಗೆ ಸಲ್ಲಿಸಬೇಕಿರುತ್ತದೆ.