ಕರ್ನಾಟಕ

karnataka

ETV Bharat / city

ರಾಜ್ಯಸಭೆ, ಪರಿಷತ್‌ ಟಿಕೆಟ್‌: ದೆಹಲಿಯಲ್ಲಿ ಬೀಡುಬಿಟ್ಟ ರಾಜ್ಯ ಕೈ ನಾಯಕರು

ಕಳೆದೊಂದು ವಾರದಿಂದ ರಾಜ್ಯಸಭೆ ಹಾಗು ವಿಧಾನ ಪರಿಷತ್‌ಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಿರುವ ರಾಜ್ಯ ಕಾಂಗ್ರೆಸ್ ನಾಯಕರು, ಒಮ್ಮತದ ತೀರ್ಮಾನಕ್ಕೆ ಬರಲಾಗದೇ ಅಂತಿಮ ನಿರ್ಧಾರವನ್ನು ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದಾರೆ.

ರಾಜ್ಯ ಕೈ ನಾಯಕರು
ರಾಜ್ಯ ಕೈ ನಾಯಕರು

By

Published : May 22, 2022, 6:50 AM IST

ಬೆಂಗಳೂರು: ರಾಜ್ಯಸಭೆಯ ಒಂದು ಹಾಗು ವಿಧಾನ ಪರಿಷತ್​ನ ಎರಡು ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಮಂದಿ ಪೈಪೋಟಿ ನಡೆಸುತ್ತಿದ್ದು ಸಮಸ್ಯೆ ಬಗೆಹರಿಸಲು ನಾಯಕರು ದೆಹಲಿಗೆ ತೆರಳಿದ್ದಾರೆ. ಕಳೆದ ಒಂದು ವಾರದಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಿರುವ ಪಕ್ಷದ ಮುಖಂಡರು ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ, ಅಂತಿಮ ನಿರ್ಧಾರವನ್ನು ಹೈಕಮಾಂಡ್ ನಾಯಕರ ಮೂಲಕವೇ ಪ್ರಕಟಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಚಿಂತನ-ಮಂಥನದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲೂ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಅಭ್ಯರ್ಥಿ ಆಯ್ಕೆ ಸಂಬಂಧ ಸಾಕಷ್ಟು ಒತ್ತಡ ಕೇಳಿಬಂದಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉದಯಪುರದಿಂದ ನೇರವಾಗಿ ದೆಹಲಿಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರವಾಗಿಯೇ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸುತ್ತಿದ್ದಾರೆ. ಉದಯಪುರದಿಂದ ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯರನ್ನು ಪ್ರಮುಖ ಆಕಾಂಕ್ಷಿಗಳು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ವಿಧಾನ ಪರಿಷತ್ತಿಗೆ ಎಸ್.ಆರ್.ಪಾಟೀಲ್, ಎಸ್.ಮನೋಹರ್, ಡಾ.ಪುಷ್ಪ ಅಮರನಾಥ್ ಸೇರಿದಂತೆ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಪಕ್ಷದ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ.

ಮೇಲ್ಮನೆಯಿಂದ ನಿವೃತ್ತಿಯಾಗುತ್ತಿರುವ ಮೂವರು ಸದಸ್ಯರ ಪೈಕಿ ವೀಣಾ ಅಚ್ಚಯ್ಯ ಅವರನ್ನು ಹೊರತುಪಡಿಸಿ ಉಳಿದ ಇಬ್ಬರು ಸದಸ್ಯರಾದ ಅಲ್ಲಂ ವೀರಭದ್ರಪ್ಪ ಹಾಗೂ ಆರ್.ಬಿ.ತಿಮ್ಮಾಪುರ್ ಪಕ್ಷದ ನಾಯಕರಲ್ಲಿ ಲಾಬಿ ನಡೆಸುತ್ತಿದ್ದು, ಮರು ಆಯ್ಕೆಗೆ ಆಸಕ್ತಿ ತೋರಿಸಿದ್ದಾರೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಒಂದು ಹಂತದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿ ತಮ್ಮ ಆಶಯ ವ್ಯಕ್ತಪಡಿಸಿದ್ದು, ಇನ್ನೊಂದೆಡೆ ರಾಷ್ಟ್ರೀಯ ನಾಯಕರು ಅನಿವಾಸಿ ಭಾರತೀಯ ಹಾಗೂ ರಾಜ್ಯ ಸರ್ಕಾರದ ನಿಕಟಪೂರ್ವ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣರನ್ನು ಈ ಬಾರಿ ವಿಧಾನಪರಿಷತ್ತಿಗೆ ಕಳುಹಿಸಿಕೊಡುವ ಚಿಂತನೆಯಲ್ಲಿದ್ದಾರೆ. ರಾಷ್ಟ್ರೀಯ ನಾಯಕರ ಈ ತೀರ್ಮಾನ ರಾಜ್ಯ ಕಾಂಗ್ರೆಸ್ ಆಕಾಂಕ್ಷಿಗಳಲ್ಲಿ ಸಾಕಷ್ಟು ನಿರಾಸೆ ಮೂಡಿಸಿದ್ದು, ರಾಜ್ಯದ ಪ್ರತಿನಿಧಿಗಳಿಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಇನ್ನೊಂದೆಡೆ, ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಆಕಾಂಕ್ಷಿಗಳ ಪೈಪೋಟಿ ಎದ್ದು ಕಾಣುತ್ತಿದೆ. ಆಯ್ಕೆ ಸಂದರ್ಭ ನಾಲ್ಕರ ಪೈಕಿ ಮೂವರು ಕಾಂಗ್ರೆಸ್ ಸದಸ್ಯರಾಗಿದ್ದರು. ಆದರೆ, ಕೆ.ಸಿ.ರಾಮಮೂರ್ತಿ ಮಧ್ಯದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿ ಮರು ಆಯ್ಕೆಗೊಂಡಿದ್ದರು. ಉಳಿದ ಇಬ್ಬರ ಪೈಕಿ ಕಾಂಗ್ರೆಸ್​ನ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್ ನಿಧನರಾಗಿದ್ದು, ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಒತ್ತಡ ಕೇಳಿಬರುತ್ತಿದೆ. ಹಾಲಿ ಸದಸ್ಯರಾಗಿರುವ ಜಯರಾಮ್ ರಮೇಶ್ ಸಹ ಮೂರು ಆಯ್ಕೆಗೆ ಆಸಕ್ತಿ ತೋರಿದ್ದಾರೆ.

ಆಸ್ಕರ್ ಫರ್ನಾಂಡಿಸ್ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್​ ನೀಡಬೇಕು ಎಂಬ ಒತ್ತಡದ ಜೊತೆಗೆ ರಾಜ್ಯಸಭೆ ಮಾಜಿ ಸದಸ್ಯ ಪ್ರೊಫೆಸರ್ ಎಂ.ವಿ.ರಾಜೀವ್ ಗೌಡ, ತುಮಕೂರು ಮಾಜಿ ಸಂಸದ ಎಸ್.​ಪಿ.ಮುದ್ದಹನುಮೇಗೌಡ ಸೇರಿದಂತೆ ಹಲವು ನಾಯಕರು ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ಒತ್ತಡದ ಜೊತೆಗೆ ಹಾಲಿ ಸದಸ್ಯರು ಮತ್ತು ಆಯ್ಕೆಗೂ ಒತ್ತಡ ಹೇರುತ್ತಿದ್ದು ಸಮಸ್ಯೆಯನ್ನು ಸ್ಥಳೀಯವಾಗಿ ಪರಿಹರಿಸಿಕೊಳ್ಳಲು ಸಾಧ್ಯವಾಗದ ರಾಜ್ಯ ಕಾಂಗ್ರೆಸ್ ನಾಯಕರು ದಿಲ್ಲಿ ವರಿಷ್ಠರತ್ತ ಮುಖ ಮಾಡಿದ್ದಾರೆ.

ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ವರಿಷ್ಠರು ಚರ್ಚೆ ನಡೆಸಿದ್ದು, ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಂಡು ದೆಹಲಿಯಿಂದ ಇಂದು ರಾತ್ರಿ ಪ್ರಯಾಣ ಬೆಳೆಸಲಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದು, ನಾಳೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಕೇದಾರನಾಥ ದೇಗುಲಕ್ಕೆ ಸಾಕುನಾಯಿ ಕರೆದುಕೊಂಡು ಹೋಗಿದ್ದ ಬ್ಲಾಗರ್​ ವಿರುದ್ಧ ಎಫ್​ಐಆರ್​

ABOUT THE AUTHOR

...view details