ಬೆಂಗಳೂರು: ಇವತ್ತು ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆಗೂ ಮುನ್ನ ನೀಡಿರುವ ಮಹತ್ವದ ಹೇಳಿಕೆ ಅರೆಕ್ಷಣ ಹುಬ್ಬೇರಿಸಿತ್ತು. 'ಜುಲೈ 25ರಂದು ಹೈಕಮಾಂಡ್ನಿಂದ ಸಂದೇಶ ಬರಬಹುದು, ಅದಕ್ಕಾಗಿ ನಾನು ಕಾಯುತ್ತಿದ್ದೇನೆ' ಎಂದು ಅವರು ಹೇಳಿದರು. ಸಿಎಂ ಮಾತಿನ ದಾಟಿಯನ್ನು ಸೂಕ್ಷ್ಮವಾಗಿ ಗಮನಿಸಿದ್ರೆ, ರಾಜ್ಯದಲ್ಲಿ ಸಿಎಂ ಬದಲಾವಣೆ ಅನ್ನೋದು ಪಕ್ಕಾ ಆಗಿದ್ದು, ಈಗ ಮುಂದಿನ ಸಿಎಂ ಯಾರು ಅನ್ನೋದೇ ರಾಜ್ಯದ ಜನರ ಕುತೂಹಲವಾಗಿದೆ.
ವಿಡಿಯೋ ಸ್ಟೋರಿ: ಕರ್ನಾಟಕಕ್ಕೆ ಮುಂದಿನ ಸಿಎಂ ಯಾರು? ಹೆಚ್ಚಿದ ಕುತೂಹಲ.. ಇದನ್ನೂ ಓದಿ: ರಾಜೀನಾಮೆ ಕುರಿತು ಸಿಎಂ ಸುಳಿವು: ಸಚಿವ ಸ್ಥಾನದ ಚಿಂತೆ, ಬಿಎಸ್ವೈ ನಿವಾಸಕ್ಕೆ ಸಚಿವರ ದೌಡು..!
ಸಿಎಂ ಬದಲಾವಣೆ ಬಗ್ಗೆ ಸಿಕ್ಕ ಸುಳಿವುಗಳಿವು..
1. ಶಾಸಕಾಂಗ ಪಕ್ಷದ ಸಭೆ ರದ್ದು
2. ಶಾಸಕರಿಗೆ ಔತಣಕೂಟವೂ ರದ್ದು
3. ಪಕ್ಷ ಸಂಘಟನೆ ಬಗ್ಗೆ ಸಿಎಂ ಮಾತು
4. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಮಂತ್ರಿ ಸ್ಥಾನವಿಲ್ಲ
5. ವಿವಿಧ ಲಿಂಗಾಯತ ಮಠಾಧೀಶರಿಂದ ಭೇಟಿ, ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ಪ್ರಯತ್ನ
ಜುಲೈ 26ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಅಂದು ರಾಜ್ಯ ಕೇಸರಿ ಪಾಳಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ, ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಶಾಸಕಾಂಗ ಪಕ್ಷದ ಸಭೆಯನ್ನು ದಿಢೀರ್ ರದ್ದು ಮಾಡಲಾಯ್ತು. ಜುಲೈ 25ಕ್ಕೆ ಬೆಂಗಳೂರಿನ ಶಾಂಘ್ರಿಲಾ ಹೋಟೆಲ್‌ನಲ್ಲಿ ಶಾಸಕರಿಗೆ ಔತಣ ಕೂಟಕ್ಕೆ ಏರ್ಪಾಡು ಮಾಡಲಾಗಿತ್ತು. ನಿನ್ನೆ ಈ ಔತಣ ಕೂಟವನ್ನೂ ರದ್ದುಪಡಿಸಲಾಗಿತ್ತು. ಈ ಮೂಲಕ ನಾಯಕತ್ವ ಬದಲಾವಣೆಗೆ ಮುಹೂರ್ತ ನಿಗದಿಯಾಗಿದ್ದು ರಾಜ್ಯದ ಜನರಿಗೆ ಸ್ಪಷ್ಟವಾಗತೊಡಗಿತು.
ಇದನ್ನೂ ಓದಿ: ರಾಜ್ಯದ ಮುಂದಿನ ಸಿಎಂ ರೇಸ್‌ನಲ್ಲಿ ಸಂತೋಷ್, ಜೋಶಿ ಸೇರಿ ಹಲವರ ಹೆಸರು
ಸಿಎಂ ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ವರಿಷ್ಠರು ಬಿಎಸ್‌ವೈಗೆ ಹುದ್ದೆ ತ್ಯಜಿಸುವಂತೆ ಸೂಚನೆ ನೀಡಿರುವುದು ಈಗ ಸ್ಪಷ್ಟವಾಗುತ್ತಿದೆ. ಏಕೆಂದರೆ, ದೆಹಲಿಯಿಂದ ವಾಪಸ್ಸಾದ ನಂತರ ವಿವಿಧ ಮಠಾಧೀಶರು ಬಂದು ಶಕ್ತಿ ಪ್ರದರ್ಶನ ಮಾಡಿರುವುದು ರಾಜೀನಾಮೆಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಇದಾದ ನಂತರ ಯಡಿಯೂರಪ್ಪ, ನಾನು ಅಧಿಕಾರದಲ್ಲಿರಲಿ, ಬಿಡಲಿ ಆದರೆ ಪಕ್ಷ ಸಂಘಟನೆ ಮಾಡುತ್ತೇನೆ. ಮುಂದೆಯೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು. ಇದು ಸಿಎಂ ಸ್ಥಾನದಿಂದ ಕೆಳಗಿಳಿಯಲು ಅವರು ಮಾನಸಿಕವಾಗಿ ಸಿದ್ಧರಾಗುತ್ತಿರುವ ಮುನ್ಸೂಚನೆಯೇ ಆಗಿತ್ತು.
ಇದನ್ನೂ ಓದಿ: ಸಿಎಂ ರೇಸ್‌ನಲ್ಲಿ ಸಿ.ಟಿ. ರವಿ, ಅರವಿಂದ ಬೆಲ್ಲದ್: ಯಾರಿಗೆ ಮಣೆ ಹಾಕಲಿದೆ ಹೈಕಮಾಂಡ್?
ಇದೀಗ ಅಧಿಕೃತವಾಗಿ ಸಿಎಂ ರಾಜೀನಾಮೆ ಕೊಡದೇ ಇದ್ದರೂ ಮಂದಿನ ಸಿಎಂ ಯಾರು ಎಂಬ ಚರ್ಚೆ ಗರಿಗೆದರಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುರುಗೇಶ ನಿರಾಣಿ, ಬಸವರಾಜ್ ಬೊಮ್ಮಾಯಿ ಹಾಗು ಡಾ. ಅಶ್ವತ್ಥ ನಾರಾಯಣ ಸೇರಿದಂತೆ ಹಲವರ ಹೆಸರುಗಳು ಸಿಎಂ ರೇಸ್‌ನಲ್ಲಿ ಕೇಳಿ ಬರುತ್ತಿವೆ. ಈ ಹೆಸರುಗಳ ಹೊರತಾಗಿಯೂ ಬಿಜೆಪಿ ಹೈಕಮಾಂಡ್ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.