ಬೆಂಗಳೂರು :ರಾಜ್ಯದಲ್ಲಿ ನಾಳೆಯಿಂದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ನೈಟ್ ಕರ್ಫ್ಯೂ ಶೇ. 50ರ ನಿಯಮ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ರಾಜ್ಯಾದ್ಯಂತ ಶಾಲಾ ಕಾಲೇಜು ನಡೆಯಲಿವೆ. ಆದರೆ, ಬೆಂಗಳೂರಿನಲ್ಲಿ ಶಾಲೆಗಳ ಆರಂಭ ಕುರಿತು ಮುಂದಿನ ವಾರ ನಿರ್ಧಾರ ಕೈಗೊಳ್ಳಲಾಗುತ್ತದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ಸಭೆ ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಮುಖ್ಯಮಂತ್ರಿ ನೇತೃತ್ವದಲ್ಲಿ ಸುದೀರ್ಘ ಎರಡು ಗಂಟೆ ಚರ್ಚೆ ನಡೆಸಲಾಗಿದೆ.
ಎಲ್ಲ ತಜ್ಞರ ಅಭಿಪ್ರಾಯ ಪಡೆದಿದ್ದೇವೆ. ನಿಮ್ಹಾನ್ಸ್, ವಿಶ್ವ ಆರೋಗ್ಯ ಸಂಸ್ಥೆ, ನಮ್ಮ ತಜ್ಞರ ಜೊತೆ ವೈಯಕ್ತಿಕವಾಗಿ ಪ್ರತ್ಯೇಕವಾಗಿ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ ಎಂದರು.
ಗೃಹ ಇಲಾಖೆ, ಪೊಲೀಸ್ ಇಲಾಖೆ, ಗೃಹ ಸಚಿವರು, ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ನೀರಾವರಿ ಸಚಿವರು ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.
ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ಅವರೆಲ್ಲರ ಅಭಿಪ್ರಾಯವನ್ನ ಪಡೆದು ಮಹತ್ವದ ನಿರ್ಧಾರ ಕೈಗೊಳ್ಳಾಗಿದೆ. ಅದರಂತೆ ಶನಿವಾರ ಹಾಗೂ ಭಾನುವಾರ ಇದ್ದ ವಾರಾಂತ್ಯದ ನಿಷೇಧಾಜ್ಞೆಯನ್ನು ಇಂದಿನಿಂದಲೇ ಜಾರಿಗೆ ಬರುವಂತೆ ತೆಗೆದು ಹಾಕಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಮಾರ್ಗಸೂಚಿ ಪಾಲಿಸಿ :ತಜ್ಞರು ಕೊಟ್ಟಿರುವ ವರದಿ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ.5ರಷ್ಟಿದೆ. ಅದು ಹೆಚ್ಚಾದಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗುತ್ತದೆ. ಅದಕ್ಕಾಗಿ ಜನರಲ್ಲಿ ವಿನಂತಿ ಮಾಡಲಾಗುತ್ತಿದೆ. ಕೊರೊನಾ ಜಾಸ್ತಿಯಾಗಲು ಅವಕಾಶ ಕೊಡಬೇಡಿ. ಸರ್ಕಾರ ರೂಪಿಸಿರುವ ಮಾರ್ಗಸೂಚಿ ಪಾಲನೆ ಮಾಡಿ ಎಂದು ಮನವಿ ಮಾಡಿದರು.
ಸಂಘ-ಸಂಸ್ಥೆಗಳು, ಜನರು, ಪ್ರತಿಪಕ್ಷ ನಾಯಕರು ಇತರ ಪಕ್ಷಗಳ ನಾಯಕರು ವೀಕೆಂಡ್ ಕರ್ಫ್ಯೂ ತೆಗೆಯಬೇಕು ಎಂದು ವಿನಂತಿ ಮಾಡಿದರು. ಆದರೂ ನಾವು ತಜ್ಞರು ನೀಡಿದ ವರದಿಯ ಆಧಾರದ ಮೇಲೆ ಅದನ್ನು ರದ್ದು ಮಾಡುವ ನಿರ್ಧಾರ ಮಾಡಿದ್ದೇವೆ. ಉಳಿದಂತೆ ಇತರ ನಿಯಮಗಳು ಮುಂದುವರೆಯಲಿವೆ.
ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ವಾರದ ಎಲ್ಲ ದಿನ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಇರಲಿದೆ. ಶೇ.50ರ ನಿರ್ಬಂಧ ನಿಯಮ ಹಾಗೂ ಪ್ರತಿಭಟನೆ ಮೆರವಣಿಗೆ, ರ‍್ಯಾಲಿ, ಜಾತ್ರೆ, ಸಮಾರಂಭಗಳಿಗೆ ಈಗಿರುವ ನಿರ್ಬಂಧ ಮುಂದುವರೆಯಲಿವೆ ಎಂದರು.
ಮಾನದಂಡದ ಮೇಲೆ ವೀಕೆಂಡ್ ಕರ್ಫ್ಯೂ ರದ್ದು:ಕೊರೊನಾ ಸಂಖ್ಯೆ ಜಾಸ್ತಿ ಆಗುತ್ತಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿಲ್ಲ. ನಮಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೇ ಮಾನದಂಡ ಎಂದು ತಜ್ಞರು ಹೇಳಿದ್ದಾರೆ. ಹಾಗಾಗಿ, ಆ ಮಾನದಂಡದ ಆಧಾರದಲ್ಲಿ ನಾವು ವೀಕೆಂಡ್ ಕರ್ಫ್ಯೂ ರದ್ದು ಮಾಡಿದ್ದೇವೆ. ಒಂದು ವೇಳೆ ದಾಖಲಾಗುವವರ ಸಂಖ್ಯೆ ಜಾಸ್ತಿಯಾದರೆ ಶೇಕಡಾವಾರು ಲೆಕ್ಕಾಚಾರದ ಮೇಲೆ ಕಠಿಣ ನಿಯಮದ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಏನೇ ಮಾಡಿದರೂ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮಾಡಬೇಕು. ಕೇವಲ ಬೆಂಗಳೂರಿನಲ್ಲಿ ಜಾಸ್ತಿಯಾಗುತ್ತಿದೆ, ರಾಜ್ಯದಲ್ಲಿ ಇತರ ಕಡೆ ಜಾಸ್ತಿಯಾಗುತ್ತದೆ ಎನ್ನುವ ಪ್ರತ್ಯೇಕ ಪ್ರತ್ಯೇಕ ಅಭಿಪ್ರಾಯಗಳು ವ್ಯಕ್ತವಾದವು. ಹಾಗಾಗಿ, ನಾವು ವೈಜ್ಞಾನಿಕವಾಗಿ ಅಕ್ಕಪಕ್ಕದ ರಾಜ್ಯಗಳಲ್ಲಿ ಏನೇನೋ ಕರ್ಫ್ಯೂ, ಲಾಕ್ಡೌನ್ ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರ, ಕೇರಳ ಎಲ್ಲಾ ಕಡೆ ಮಾಡಿರುವುದನ್ನು ವಿಸ್ತೃತವಾಗಿ ಚರ್ಚಿಸಿ ಎಲ್ಲದರ ಆಧಾರವಾಗಿ ವೈಜ್ಞಾನಿಕವಾಗಿ ಎಲ್ಲವನ್ನೂ ಪರಿಶೀಲಿಸಿ ತಜ್ಞರ ಒಟ್ಟಾಭಿಪ್ರಾಯ ತೆಗೆದುಕೊಂಡು ಇಂದು ರಾಜ್ಯ ಸರ್ಕಾರದಿಂದ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದರು.
ಜನರಲ್ಲಿ ಜಾಗೃತಿ ಅಗತ್ಯ :ರಾತ್ರಿ ಚಟುವಟಿಕೆ, ಬಾರ್ ಮತ್ತು ಪಾರ್ಟಿಗಳು ನಡೆಯುವ ವಿಚಾರದಲ್ಲಿ, ಕ್ಲಬ್‌ಗಳ ಚಟುವಟಿಕೆ ನಿರ್ಬಂಧ ಮಾಡಬೇಕಿದೆ. ಜನರನ್ನು ಕೂಡ ಜಾಗೃತಿ ಮೂಡಬೇಕಿದೆ. ಹಾಗಾಗಿ, ರಾತ್ರಿ ಕರ್ಫ್ಯೂ ಮುಂದುವರೆಸಲಾಗುತ್ತದೆ. ಇದನ್ನು ಎಲ್ಲ ರಾಜ್ಯಗಳಲ್ಲಿಯೂ ಮಾಡಲಾಗಿದೆ ಎಂದರು.
ಜನವರಿ 20ರ ಮಾಹಿತಿಯಂತೆ ರಾಜ್ಯದಲ್ಲಿ 2,93,231 ಲಕ್ಷ ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 2,86,000 ಸೋಂಕಿತರು ಹೋಂ ಐಸೊಲೇಟ್ ಇದ್ದಾರೆ. 5,343 ಜನ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. 340 ಐಸಿಯು, 127 ವೆಂಟಿಲೇಟರ್ನಲ್ಲಿದ್ದಾರೆ. ಶೇ.19.94 ಪಾಸಿಟಿವಿಟಿ ದರ ಇದೆ. ಶೇ.8ರಷ್ಟು ಮಕ್ಕಳು, ಶೇ.16.57 ವಯಸ್ಕರಿಗೆ ಪಾಸಿಟಿವ್ ಬರುತ್ತಿದೆ. ಮಕ್ಕಳ ಮೇಲೆ ಹೆಚ್ಚಿನ ನಿಗಾಗೆ ಸಿಎಂ ಸೂಚನೆ ನೀಡಿದ್ದಾರೆ ಎಂದರು ವಿವರಿಸಿದರು.
ಇದನ್ನೂ ಓದಿ:ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಗೆ ಉತ್ತರಾಧಿಕಾರಿಯಾಗಲು ಹೆಣ್ಣು ಮಕ್ಕಳು ಅರ್ಹರು.. ಸುಪ್ರೀಂಕೋರ್ಟ್ ತೀರ್ಪು