ಕರ್ನಾಟಕ

karnataka

ETV Bharat / city

ಅಗ್ಗದ ದರದಲ್ಲಿ ಮರಳು ಪೂರೈಸಲು ಹೊಸ‌ ನೀತಿ, ಕಿತ್ತೂರು ಕರ್ನಾಟಕ ನಾಮಕರಣ: ಸಂಪುಟ ಸಭೆ ಮುಖ್ಯಾಂಶಗಳು..

ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2021ಗೆ ಅನುಮೋದನೆ ನೀಡಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ಟನ್​ ಮರಳಿಗೆ 300 ರೂ‌. ಹಾಗೂ ನದಿ ಪಾತ್ರದ ವ್ಯಾಪ್ತಿಯಲ್ಲಿ ಮರಳಿಗೆ 700 ರೂ. ನಿಗದಿ ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

cabinet
cabinet

By

Published : Nov 8, 2021, 3:44 PM IST

Updated : Nov 8, 2021, 11:04 PM IST

ಬೆಂಗಳೂರು:ಸುಲಭವಾಗಿ ಅಗ್ಗದ ದರದಲ್ಲಿ ಗ್ರಾಹಕರಲ್ಲಿ ಮರಳು ಸಿಗುವ ನಿಟ್ಟಿನಲ್ಲಿ ಹೊಸ ಮರಳು ನೀತಿಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2021ಗೆ ಅನುಮೋದನೆ ನೀಡಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿ ಟನ್​ ಮರಳಿಗೆ 300 ರೂ‌. ಹಾಗೂ ನದಿ ಪಾತ್ರದ ವ್ಯಾಪ್ತಿಯಲ್ಲಿ ಮರಳಿಗೆ 700 ರೂ. ನಿಗದಿ ಮಾಡಲಾಗಿದೆ. ಸರ್ಕಾರಿ ಯೋಜನೆಗಳು ಹಾಗೂ ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ನೀಡಲು ಗ್ರಾ.ಪಂ ವ್ಯಾಪ್ತಿಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ‌ ಎಂದರು.

ಹೊಸ ಮರಳು ನೀತಿಯಡಿ ಕರಾವಳಿ ಭಾಗದಲ್ಲಿ ಮುಳುಗಿ ನದಿಯಿಂದ ಮರಳು ತೆಗೆಯುವ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡಲಾಗಿದೆ. ಆದರೆ ಮರಳುಗಾರಿಕೆಗೆ ಮಷಿನರಿಗಳನ್ನು ಬಳಸುವಂತಿಲ್ಲ ಎಂದು ತಿಳಿಸಿದರು.

ಕಿತ್ತೂರು ಕರ್ನಾಟಕ ನಾಮಕರಣ:

ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪ್ರದೇಶಗಳನ್ನು 'ಕಿತ್ತೂರು ಕರ್ನಾಟಕ' ಪ್ರದೇಶ ಎಂದು ನಾಮಕರಣ ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ. ಈ ಬಗ್ಗೆ ಸಿಎಂ ಉಪ ಚುನಾವಣೆ ವೇಳೆ ಘೋಷಣೆ ಮಾಡಿದ್ದರು. ಮುಂಬೈ ಕರ್ನಾಟಕ ಭಾಗವನ್ನು ಇನ್ನು ಮುಂದೆ ಕಿತ್ತೂರು ಕರ್ನಾಟಕ ಎಂದು ಕರೆಯಲಾಗುವುದು. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ

ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ:

ಈ ಬಾರಿ ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಿ.13-24ರ ವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಅಂತಿಮ‌ ದಿನಾಂಕ ಪ್ರಕಟಿಸಲಾಗುವುದು.

ಪ್ರಮುಖ ತೀರ್ಮಾನಗಳೇನು?:

- ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಅಡ್ಡಲಾಗಿ 1348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ 'ಪಶ್ಚಿಮವಾಹಿನಿ ಯೋಜನೆ'ಯ ರೂ. 3986.25 ಕೋಟಿ ಮೊತ್ತದ ಮಾಸ್ಟರ್ ಪ್ಲಾನ್‌ಗೆ ತಾತ್ವಿಕ ಹಾಗೂ 2021-22ನೇ ಸಾಲಿನಲ್ಲಿ ರೂ. 500 ಕೋಟಿ ಅಂದಾಜು ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

- ಉಪ ಖನಿಜಗಳ ಗುತ್ತಿಗೆ ಅವಧಿ ಕುರಿತಂತೆ "ಕರ್ನಾಟಕ ಉಚ್ಚ ಖನಿಜ ರಿಯಾಯಿತಿ" (ತಿದ್ದುಪಡಿ) ನಿಯಮಗಳು, 2021ಕ್ಕೆ ಅನುಮೋದನೆ.

- ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಕ್ರಿಯಾ ಯೋಜನೆ-6 ರಲ್ಲಿ ಅನುಮೋದಿತವಾಗಿರುವ 30 ಕೋಟಿ ರೂ. ಅಂದಾಜು ವೆಚ್ಚದ ಹೊಸಪೇಟೆ ನಗರದ ಹೊಸಪೇಟೆ-ಬಳ್ಳಾರಿ ರಸ್ತೆ ಹೆಚ್.ಎಲ್.ಸಿ ಕಾಲುವೆಯಿಂದ ಇಂಗಳಗಿ ಕ್ರಾಸ್‌ವರೆಗೆ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ.

- ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಕ್ರಿಯಾ ಯೋಜನೆ ಬಳ್ಳಾರಿ-3 (ದಕ್ಷಿಣ) ಮುಂಡರಗಿ ಬಡಾವಣೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ರೂ. 12.75 ಕೋಟಿಗಳ ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.

- ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ಕ್ರಿಯಾ ಯೋಜನೆ-3 ರಡಿ ಬಳ್ಳಾರಿಯ ಮುಂಡರಗಿ ಬಡಾವಣೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ರೂ. 17.32 ಕೋಟಿಗಳ ಅಂದಾಜು ವೆಚ್ಚದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.

- ನೇಕಾರರ ಪ್ಯಾಕೇಜ್ ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್.ಎಂ.ಇ) ಘಟಕಗಳ ಸ್ಥಾಪನೆಗೆ ರೂ. 374.16 ಕೋಟಿ ಸಹಾಯಧನ ಒದಗಿಸುವ ಪರಿಷ್ಕೃತ ಯೋಜನೆಗೆ ಅನುಮೋದನೆ.

- ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿ ಮಾಡಲು ಅನುಮೋದನೆ.

- ರಾಜ್ಯ ನಾಗರಿಕ ಸೇವಾ ಹುದ್ದೆಗಳ ನೇರ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ರಿಕ್ತ ಸ್ಥಾನ ಆಧಾರಿತ ನೀತಿಯ ಬದಲಾಗಿ ಹುದ್ದೆ ಆಧಾರಿತ ನೀತಿಯನ್ನು ಜಾರಿಗೊಳಿಸಲು ತೀರ್ಮಾನ.

- 50 ಕೋಟಿ ರೂ. ಮೀರಿದ ನಿರ್ಮಾಣ ಕಾಮಗಾರಿಗಳೂ ಸೇರಿದಂತೆ ಸರಕು ಮತ್ತು ಸೇವೆಗಳ ಸಂಗ್ರಹಣೆಯ ಟೆಂಡರ್‌ ಮತ್ತು ಅಂದಾಜುಗಳ ಟೆಂಡರ್‌ ಪೂರ್ವ ಪರಿಶೀಲನೆ ಮಾಡಲು ಅನುಕೂಲವಾಗುವಂತೆ ಟೆಂಡರ್ ಪೂರ್ವ ಪರಿಶೀಲನೆ ಸಮಿತಿಯನ್ನು ರಚಿಸಲು ತೀರ್ಮಾನ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಟೆಂಡರ್ ಅಂದಾಜುಗಳ ಪರಿಶೀಲನೆ ನಡೆಸಿ ಟೆಂಡರ್ ಅಂತಿಮಗೊಳಿಸಲಿದೆ.

- ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಡಿ ನೂತನವಾಗಿ ನಿರ್ಮಿಸಿರುವ 450 ಹಾಸಿಗೆಗಳ ಬೋಧಕ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ 165.47 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

- ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ರೂ. 399.84 ಕೋಟಿಗಳ ವೆಚ್ಚದ ಕ-ಸೇಫ್-2 ಕ್ರಿಯಾ ಯೋಜನೆಗೆ ಅನುಮೋದನೆ.

- ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಕನಗನಹಳ್ಳಿ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಸರಣಿ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ರೂ. 11,34,58,817 ರೂ.ಗೆ ಆಡಳಿತಾತ್ಮಕ ಅನುಮೋದನೆ.

- ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ಮುದೇನುರು-ಬಲಕುಂದಿ ಗ್ರಾಮಗಳ ನಡುವೆ ವೇದಾವತಿ ನದಿಗೆ ಅಡ್ಡಲಾಗಿ ಸೇತುವೆ ಸಹಿತ ಬಾಂದಾರ ನಿರ್ಮಾಣ ಕಾಮಗಾರಿಯ ರೂ. 35 ಕೋಟಿ ಮೊತ್ತದ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

- ಹೆದ್ದಾರಿ ಅಭಿವೃದ್ಧಿ ಯೋಜನೆಯ 1891.90 ಕೋಟಿಗಳ ಪರಿಷ್ಕೃತ ಯೋಜನಾ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.

- ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಆಗರ ಗ್ರಾಮದ ಸ.ನಂ. 28ರಲ್ಲಿ 0-21 ಗುಂಟೆ ಖರಾಬು ಜಮೀನನ್ನು ಶ್ರೀ ಸ್ವಾನಂದಾಶ್ರಮ ಬಾಲ ಗಣಪತಿ ಪ್ರತಿಷ್ಠಾನಕ್ಕೆ ಮಂಜೂರಿಗೆ ತೀರ್ಮಾನ

- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಮೊತ್ತವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿರುವ ವಿವಿಧ ಸಂಘ ಸಂಸ್ಥೆಗಳು ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸಲು ಮುಂದೆ ಬಂದಲ್ಲಿ ನಿಯಮಾನುಸಾರ ವಿಧಿಸಲಾದ ಬಡ್ಡಿಯ ಒಟ್ಟು ಮೊತ್ತದ ಶೇ.50 ರಷ್ಟು ಬಡ್ಡಿ ಮನ್ನಾ ಮಾಡಲು ತೀರ್ಮಾನ. ದೇವಸ್ಥಾನ, ಶಿಕ್ಷಣ ಸಂಸ್ಥೆ, ಅನಾಥಾಶ್ರಮಗಳಿಗೆ ಮಾತ್ರ ಈ ಬಡ್ಡಿ ಮನ್ನಾ ಅನ್ವಯ.

- ಪಾಂಡೋಮಟ್ಟಿಯಲ್ಲಿನ ಶ್ರೀ ಬಸವ ವಿದ್ಯಾ ಪೀಠ (ರಿ) ವಿರಕ್ತಮಠ ಅವರಿಗೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ನಾಗರಿಕ ಸೌಲಭ್ಯ ನಿವೇಶನದ ಗುತ್ತಿಗೆ ಮೊತ್ತವನ್ನು ಕಡಿಮೆ ಮಾಡಲು ತೀರ್ಮಾನ.

- ಬೆಂಗಳೂರು ನಗರ ಜಿಲ್ಲೆಯ ವಿವಿಧ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 69-07 ಎಕರೆ/ಗುಂಟೆ "ಸರ್ಕಾರಿ ಗೋಮಾಳ" ಮತ್ತು “ಸರ್ಕಾರಿ ಖರಾಬು" ವರ್ಗೀಕರಣಗಳ ಜಮೀನುಗಳನ್ನು "ಬೆಂಗಳೂರು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ"ಯನ್ನು ಅನುಷ್ಠಾನಗೊಳಿಸಲು "ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರು.

Last Updated : Nov 8, 2021, 11:04 PM IST

ABOUT THE AUTHOR

...view details