ಬೆಂಗಳೂರು: ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ರಾಜ್ಯ ಬಿಜೆಪಿ ನಾಯಕರು ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ನಡೆದು ಹೊಸ ಸಚಿವರು ಅಧಿಕಾರ ಸ್ವೀಕರಿಸುತ್ತಿದ್ದರು. ಆದರೆ, ವಿಧಾನ ಪರಿಷತ್ ಮತ್ತು ರಾಜ್ಯಸಭೆಗಳ ಚುನಾವಣೆ ಸದ್ದಿಲ್ಲದೆ ಸಂಪುಟ ವಿಸ್ತರಣೆ ಕಸರತ್ತನ್ನು ಸ್ಥಗಿತಗೊಳಿಸಿದೆ.
ಇನ್ನೇನು ಒಂದೆರಡು ದಿನಗಳಲ್ಲಿ ಮಂತ್ರಿಮಂಡಲ ವಿಸ್ತರಣೆ ಆಗಿಯೇ ಬಿಡುತ್ತದೆ, ಬಿಜೆಪಿ ಹೈಕಮಾಂಡ್ ಅಮಿತ್ ಶಾ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಕೂಡಾ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿ ಸಮಾಲೋಚಿಸಿದ್ದಾರೆ. ವಿದೇಶ ಪ್ರವಾಸದಿಂದ ಪ್ರಧಾನಿ ಮೋದಿ ವಾಪಸ್ ಬಂದಿದ್ದಾರೆ. ಹೀಗಾಗಿ ಮಂತ್ರಿಮಂಡಲ ವಿಸ್ತರಣೆಗೆ ಯಾವುದೇ ಅಡ್ಡಿ ಇಲ್ಲ ಎಂದು ಭಾವಿಸಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿರುವುದು ಭ್ರಮನಿರಸನ ಉಂಟುಮಾಡಿದೆ.
ಹೈಕಮಾಂಡ್ ವಲಯದಲ್ಲಿ ಮತ್ತು ರಾಜ್ಯ ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಪಟ್ಟ ಯಾವುದೇ ಚಟುವಟಿಕೆಗಳು ಸದ್ಯಕ್ಕೆ ಕಾಣುತ್ತಿಲ್ಲ. ಮೇಲ್ಮನೆ ಚುನಾವಣೆ ದಿನಾಂಕ ಪ್ರಕಟವಾಗಿರುವುದು ಮಂತ್ರಿಮಂಡಲ ವಿಸ್ತರಣೆಯನ್ನು ಸದ್ಯಕ್ಕೆ ಮೊಟಕುಗೊಳಿಸಿ ಮುಂದಿನ ತಿಂಗಳಿಗೆ ಮುಂದೂಡಿದಂತಿದೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂನ್ 3ರಂದು ನಡೆಯುವ ಚುನಾವಣೆ, ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ನಡೆಯುವ ಚುನಾವಣೆ ಹಾಗು ವಿಧಾನ ಪರಿಷತ್ತಿನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 13 ರಂದು ನಡೆಯುವ ದ್ವೈವಾರ್ಷಿಕ ಚುನಾವಣೆಯ ಕಾರಣಕ್ಕೆ ಅನಿವಾರ್ಯವಾಗಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದೂಡಲಾಗಿರಬಹುದೆಂದು ಬಿಜೆಪಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಇತ್ತೀಚೆಗೆ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ಹೇಳಿರುವುದು ಹಲವರಲ್ಲಿ ನಿರೀಕ್ಷೆ ಮತ್ತು ಆತಂಕ ಉಂಟುಮಾಡಿದೆ.