ಬೆಂಗಳೂರು: ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶಕ್ಕಾಗಿ 2022-23 ನೇ ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿ ಉತ್ತೇಜನ ವಲಯಕ್ಕೆ ಒಟ್ಟಾರೆಯಾಗಿ 55,657 ಕೋಟಿಗಳ ಅನುದಾನ ಒದಗಿಸಲಾಗಿದೆ.
ರಾಜ್ಯಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹೂಡಿಕೆ ಸ್ನೇಹಿ ರಾಜ್ಯಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು, ಐಟಿ-ಬಿಟಿ ವಲಯಗಳಿಗೂ ಉತ್ತೇಜನ ಜೊತೆಗೆ ಯುವಕರಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಪಡಿಸಲು ಒತ್ತು ನೀಡಿದೆ.
2024ರೊಳಗೆ ದೇಶದ ಎಲ್ಲ ಗ್ರಾಮೀಣ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆಗೆ ಜಲಜೀವನ್ ಮಿಷನ್ ಯೋಜನೆ ಜಾರಿ ಮಾಡಲಿದೆ. ಈಗಾಗಲೇ ಈ ಯೋಜನೆಯಡಿ ಇದುವರೆಗೂ 3,592 ಕೋಟಿ ರೂ ವೆಚ್ಚದಲ್ಲಿ 21.28 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. ಮುಂದಿನ ಎರಡು ವರ್ಷದಲ್ಲಿ ತಲಾ 25 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 2022-23ನೇ ಸಾಲಿನಲ್ಲಿ 7,000 ಕೋಟಿ ವೆಚ್ಚ ಮಾಡುವ ಗುರಿ ಹೊಂದಲಾಗಿದೆ.
PMGSY ಯೋಜನೆಯಡಿ ಇನ್ನೂ 1,286 ಕಿ.ಮೀ ರಸ್ತೆ ನಿರ್ಮಾಣ
ರಾಜ್ಯ ಸರ್ಕಾರದ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ 1,600 ಕೋಟಿ ರೂ.ಗಳ ಕಾಮಗಾರಿಯನ್ನು 2022-23 ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಸುಧಾರಣೆಗೆ 300 ಕೋಟಿ ರೂ.ಒದಗಿಸಲು ತೀರ್ಮಾನಿಸಲಾಗಿದೆ.
ಅಮೃತ ಗ್ರಾಮ ಪಂಚಾಯಿತಿ ಯೋಜನೆ ಅನುಷ್ಠಾನಕ್ಕಾಗಿ 250 ಗ್ರಾಮ ಪಂಚಾಯತಿಗಳಿಗೆ ತಲಾ 25 ಲಕ್ಷ ರೂ. ನಂತೆ ಅನಿರ್ಬಂಧಿತ ಅನುದಾನ ನೀಡಲು ಒಟ್ಟು ಒನ್ 185 ಕೋಟಿ ರೂ. ಅನುದಾನ ನೀಡಿದೆ. ಪ್ರಸಕ್ತ ವರ್ಷದಲ್ಲಿ ಹೆಚ್ಚುವರಿ 750 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದ 2,814 ಗ್ರಾಮ ಪಂಚಾಯಿತಿಗಳಿಗೆ ಆರೋಗ್ಯಕ್ಕೆ ವಿತರಿಸುವ 'ಪಂಚಾಯಿತಿ ಆರೋಗ್ಯ ಯೋಜನೆ'ಯನ್ನು ಉಳಿದ 3,146 ಗ್ರಾಮ ಪಂಚಾಯಿತಿಗಳಿಗೆ ವಿಸ್ತರಣೆ ಮಾಡಲಾಗಿದೆ.
ರಾಜ್ಯದ 33,000 ಗ್ರಾಮ ಪಂಚಾಯಿತಿ ಕೆರೆಗಳನ್ನು ಸರ್ವೆ ಮಾಡಿಸಿ ಪ್ರಸ್ತುತ ಪ್ರಾರಂಭಿಕ ಹಂತವಾಗಿ 1000 ಕೆರೆಗಳನ್ನು ಗುರುತಿಸಿ ಪ್ರತಿ ಕೆರೆಗೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು 100 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಬೆಂಗಳೂರು ಒನ್ ಮಾದರಿಯಲ್ಲಿ ಸರ್ಕಾರಿ ಸೇವೆಗಳನ್ನು ಗ್ರಾಮಸ್ಥರಿಗೆ ತಲುಪಿಸಲು 12 ಜಿಲ್ಲೆಯಲ್ಲಿ ಆರಂಭಿಸಿರುವ ಗ್ರಾಮ ಒನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಜನನ, ಮರಣ ಮತ್ತು ವಿವಾಹ ನೋಂದಣಿಯನ್ನು ಗ್ರಾಮಪಂಚಾಯತಿಗಳ ಮೂಲಕವೇ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಡಾಕ್ಟರ್ ನಂಜುಂಡಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿಯ ಶಿಫಾರಸು ಜಾರಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಈವರೆಗೆ 28,429 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಈ ಯೋಜನೆಗೆ ಮಾನವ ಅಭಿವೃದ್ಧಿಗೆ ಬಹು ಮುಖ್ಯವಾಗಿರುವ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ, ಬಡತನ ನಿರ್ಮೂಲನೆ, ನೀರು ಪೂರೈಕೆ ಮತ್ತು ಶುಚಿತ್ವ ಇತ್ಯಾದಿ ಕ್ಷೇತ್ರಗಳ ಮೇಲೆ ಹೆಚ್ಚಿನ ಆದ್ಯತೆ ನೀಡಿ ಇನ್ನಷ್ಟು ಬಲಪಡಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು ಇದರ ಶಿಫಾರಸು ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3,000 ಕೋಟಿ ರೂ.ಗಳ ಆಯವ್ಯಯ ನೀಡಿಕೆ. ಶಿಕ್ಷಣ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ 1,500 ಕೋಟಿ ಹಾಗೂ ಮೈಕ್ರೋ ಯೋಜನೆಗಳಿಗೆ 1,500 ಕೋಟಿ ಮೀಸಲಿಡುವುದಾಗಿ ಸಿಎಂ ಹೇಳಿದ್ದಾರೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನ ಮೂಲಭೂತ ಸೌಕರ್ಯ ವೃದ್ಧಿಗೆ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಲ್ಲಿ ಒಟ್ಟು 3885 ಕೋಟಿ ರೂಗಳ ಮೊತ್ತದಲ್ಲಿ 2022-23 ನೇ ಸಾಲಿನಿಂದ 24-25 ನೇ ಸಾಲಿನ ಅವಧಿಯಲ್ಲಿ ಅನುಷ್ಠಾನ.
ರಾಜ್ಯದ ನಗರಗಳಲ್ಲಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮುಂದಿನ ಐದು ವರ್ಷದಲ್ಲಿ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರಸರ್ಕಾರದಿಂದ 4,615 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ 2.0 ಮುಂದಿನ ಐದು ವರ್ಷಗಳ ಅವಧಿಯಲ್ಲಿ 2,245 ಕೋಟಿ ರೂ.ಗಳ ಕೇಂದ್ರದ ನೆರವಿನೊಂದಿಗೆ ಅನುಷ್ಠಾನ ಮಾಡಲಾಗುತ್ತದೆ. ಪೌರಕಾರ್ಮಿಕರಿಗೆ ಇದೇ ಮೊದಲ ಬಾರಿಗೆ ಮಾಸಿಕ 2,000 ರೂ.ಗಳ ಸಂಕಷ್ಟದ ಪರಿಹಾರ ಘೋಷಣೆ.
ಬಿಡಬ್ಲ್ಯೂಎಸ್ಎಸ್ಬಿ ಮಂಡಳಿಯ ಪ್ರಸ್ತುತ 5,878 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ 2021-22 ನೇ ಸಾಲಿನಲ್ಲಿ 18 ಯೋಜನೆಗಳು ಹಾಗೂ 22-23 ನೇ ಸಾಲಿನಲ್ಲಿ 38 ಯೋಜನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ವಿದ್ಯುತ್ ರಹಿತರೆಂದು ಗುರುತಿಸಲಾಗಿರುವ ರಾಜ್ಯದ 1.65 ಲಕ್ಷ ಮನೆಗಳಿಗೆ ಬೆಳಕು ಕಾರ್ಯಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 98,448 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಉಳಿದ ಮನೆಗಳಿಗೂ ಶೀಘ್ರ ಸಂಪರ್ಕ ಕಲ್ಪಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ರಾಜ್ಯದ ನವೀಕರಿಸಬಹುದಾದ ಇಂಧನ ಮೂಲಗಳ ಹೆಚ್ಚಿಸಲು ಕೆಪಿಸಿಎಲ್ ನಿಂದ 2,000 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರವನ್ನು ಶರಾವತಿ ಸಂಕೀರ್ಣದಲ್ಲಿ 5,391 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೆಪಿಟಿಸಿಎಲ್ ವತಿಯಿಂದ 64 ಹೊಸ ಉಪ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ.
ಪಿಎಂ-ಕುಸುಮ್ ಕಂಪೋನೆಂಟ್ ಬಿ ಯೋಜನೆಯಲ್ಲಿ 227 ಕೋಟಿ ರೂ.ಗಳ ವೆಚ್ಚದಲ್ಲಿ 10,000 ಸೌರಶಕ್ತಿ ಆಧಾರಿತ ನೀರಾವರಿ ಪಂಪ್‌ಸೆಟ್‌ಗಳ ಕ್ರೆಡೆಲ್ ಸಂಸ್ಥೆ ವತಿಯಿಂದ ಅನುಷ್ಠಾನ ಮಾಡಲಾಗುತ್ತದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ ನಾಲ್ಕರ ಘಟ್ಟ ಎರಡರಲ್ಲಿ ಒಟ್ಟು 2,275 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಯನ್ನು 3,200 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
1,008 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳ ಜೀವಿತಾವಧಿ ಮುಕ್ತಾಯವಾಗಿದ್ದು ಮರು ಡಾಂಬರೀಕರಣಕ್ಕೆ ಸರ್ಕಾರ ನಿರ್ಧಿರಿಸಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಸ್ಕಿ ಸಿಂಧನೂರು ಗದಗ ಮತ್ತು ಯಾದಗಿರಿ ನಗರಗಳಿಗೆ ಬೈಪಾಸ್ ರಸ್ತೆ ನಿರ್ಮಾಣ. ಈ ಯೋಜನೆಗೆ ಅವಶ್ಯವಿರುವ ಭೂಸ್ವಾದಿನ ವೆಚ್ಚದಲ್ಲಿ ರಾಜ್ಯ ಸರ್ಕಾರದ ಪಾಲನ್ನು ಬರಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ವರ್ತುಲ ರಸ್ತೆ ನಿರ್ಮಿಸಲು ಕೇಂದ್ರ ಸರ್ಕಾರ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. 9 ನೂತನ ರೈಲ್ವೆ ಮಾರ್ಗ ನಿರ್ಮಾಣವನ್ನು ರೈಲ್ವೆ ಇಲಾಖೆಯೊಂದಿಗೆ ಶೇ. 50-50 ಹಂಚಿಕೆ ಆಧಾರದಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ.
55 ಕಿ.ಮೀ ಉದ್ದದ ಗದಗ-ಯಲವಿಗಿ ನೂತನ ರೈಲು ಮಾರ್ಗ ಯೋಜನೆಯನ್ನು 640 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಭೂಸ್ವಾಧೀನವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಗೆ ನಿರ್ಧರಿಸಲಾಗಿದೆ.
ಉತ್ತರ ಕರ್ನಾಟಕ ಭಾಗದ ಬಹುದಿನಗಳ ನಿರೀಕ್ಷೆಯ ಧಾರವಾಡ ಕಿತ್ತೂರು ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಯನ್ನು 927 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಸರ್ಕಾರವು ರಾಜ್ಯದ ಕರಾವಳಿ ಪ್ರದೇಶದಲ್ಲಿ ಬಂದರು ಅಭಿವೃದ್ಧಿ ಹಾಗೂ ಕಡಲತೀರದ ವ್ಯಾಪಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಯಸಿದ್ದು, ಈ ನಿಟ್ಟಿನಲ್ಲಿ 1,880 ಕೋಟಿ ರೂ.ಗಳ ವೆಚ್ಚದಲ್ಲಿ 24 ಯೋಜನೆಯನ್ನು ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ಮಂಗಳೂರು ಬಂದರು ವಿಸ್ತರಣೆ
- ಕೇಂದ್ರ ಸರ್ಕಾರದ ನೆರವಿನೊಂದಿಗೆ 350 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಂಗಳೂರು ಬಂದರನ್ನು ವಿಸ್ತರಿಸಲಾಗುವುದು ಹಾಗೂ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಕ್ಕೆ ಮೀಸಲಾದ ಜೆಟ್ಟಿ ಮತ್ತು ಇತರ ಸಂಬಂಧಿತ ಮೂಲ ಸೌಕರ್ಯ ಸೌಲಭ್ಯ ಸ್ಥಾಪಿಸಲು ಪ್ರಸ್ತಾಪ
- ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಣಿ-ಬೆಳಕೇರಿ ಯಲ್ಲಿ ಗ್ರೀನ್ಫೀಲ್ಡ್ ಬಂದರುಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪ
- ಮೊಟ್ಟಮೊದಲ ಬಾರಿಗೆ ರಾಜ್ಯ ಮತ್ತು ಕೇಂದ್ರದ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ಕಾರವಾರದಲ್ಲಿ ಜಲಸಾರಿಗೆ ಮತ್ತು ಮೀನುಗಾರಿಕೆ ತರಬೇತಿ ಸಂಸ್ಥೆ ಸ್ಥಾಪಿಸಲು ಪ್ರಸ್ತಾಪ
- ಸಮಗ್ರ ಉದ್ಯೋಗ ನೀತಿ ಜಾರಿಗೊಳಿಸಲಿದ್ದು, ರಾಜ್ಯದ ಜನರಿಗೆ ಹೆಚ್ಚಿನ ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಕ್ರಮ
- ಜವಳಿ ಆಟಿಕೆ ತಯಾರಿಕೆ, ಎಫ್ಎಂಸಿಜಿ ಚರ್ಮ ಉತ್ಪನ್ನಗಳು ಆಹಾರ ಸಂಸ್ಕರಣೆ ಮತ್ತು ಆಭರಣಗಳ ಮೇಲಿನ ಹೆಚ್ಚಿನ ಒತ್ತು ನೀಡಿ ಹೂಡಿಕೆದಾರನ ಆಕರ್ಷಿಸಲು ಕ್ರಮ
- ನವಕರ್ನಾಟಕದಿಂದ ನವಭಾರತ ನಿರ್ಮಾಣ ಎಂಬ ಧ್ಯೇಯದಲ್ಲಿ ಯೋಜನಾಬದ್ಧವಾಗಿ ಪರಿಸರಸ್ನೇಹಿ ನಗರಗಳನ್ನು ನಿರ್ಮಿಸು ಉದ್ದೇಶ
- ಮೂಲಸೌಲಭ್ಯ ವಸತಿ ಶಿಕ್ಷಣ ಆರೋಗ್ಯ ಹಾಗೂ ವಾಣಿಜ್ಯ ಕೈಗಾರಿಕಾ ಪ್ರದೇಶಗಳನ್ನು ವಿಶೇಷವಾಗಿ ಅಳವಡಿಸಿ ಭವಿಷ್ಯದ ನಗರಗಳ ನಿರ್ಮಾಣ
- ರಾಜ್ಯದ ಆರ್ಥಿಕ ದುರ್ಬಲ ವರ್ಗದವರನ್ನು ಉದ್ಯಮಶೀಲರನ್ನಾಗಿಸಲು ಕೆಐಎಎಡಿಬಿ ಹಾಗೂ ಕೆಎಸ್ಎಸ್‌ಐಡಿಸಿ ಸಂಸ್ಥೆಗಳು ಸ್ಥಾಪಿಸುವ ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ಸಣ್ಣ ನಿವೇಶನಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಆದ್ಯತೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಮೆಗಾ ಜ್ಯುವೆಲರಿ ಪಾರ್ಕ್
ಚಿನ್ನ ಮತ್ತು ಆಭರಣ ಕುಶಲಕರ್ಮಿಗಳ ಹಾಗೂ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ವಿಶೇಷ ಸೌಲಭ್ಯ ಒದಗಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 'ಮೆಗಾ ಜ್ಯುವೆಲರಿ ಪಾರ್ಕ್' ಬೆಂಗಳೂರಿನಲ್ಲಿ ಸ್ಥಾಪನೆ. ಹತ್ತು ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ
- ರಾಜಕೀಯ ವಿದೇಶಿ ಹೂಡಿಕೆ ಆಕರ್ಷಿಸಲು ಬೆಂಗಳೂರಿನಲ್ಲಿ 2022ರ ನಂಬರ್ 2 ರಿಂದ 4 ರವರೆಗೆ 'ಇನ್ವೆಸ್ಟ್ ಕರ್ನಾಟಕ 2022' ಜಾಗತಿಕ ಹೂಡಿಕೆದಾರರ ಸಭೆ ಆಯೋಜನೆ
- ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಅನ್ನ ಅಭಿವೃದ್ಧಿಪಡಿಸಲಾಗುವುದು. ಕ್ಲಸ್ಟರ್ ವ್ಯಾಪ್ತಿಗೆ ಬರುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹ ಪ್ಯಾಕೇಜ್ ಘೋಷಣೆ
- ನೋಂದಾಯಿತ ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆ ಅಡಿಯಲ್ಲಿ 2 ಸಾವಿರ ರೂ.ಗಳು ವಾರ್ಷಿಕ ಆರ್ಥಿಕ ನೆರವು ನೀಡಿಕೆಯನ್ನು 5 ಸಾವಿರ ರೂಪಾಯಿಗೆ ಹೆಚ್ಚಳ
- ನೇಕಾರಿಕೆ ನೇಕಾರಿಕೆ ಉದ್ದೇಶಕ್ಕಾಗಿ ಎದುರಿಸುತ್ತಿರುವ ಬಂಡವಾಳ ಕೊರತೆ ನೀಗಿಸಲು ರಾಜ್ಯದ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳ ಮೂಲಕ ಪಡೆಯುವ ಸಾಲದ ಮೇಲೆ ಶೇಕಡಾ 8 ರಷ್ಟು ಬಡ್ಡಿ ಸಹಾಯಧನವನ್ನ ರಾಜ್ಯ ಸರ್ಕಾರದಿಂದ ನೀಡಿಕೆ
- 2019-20ರಲ್ಲಿ ಸ್ಥಗಿತಗೊಂಡಿರುವ ಮೈಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರದ ನಿರ್ಧಾರ ಮುಂದಿನ ಎರಡು ವರ್ಷಗಳ ಅವಧಿಗೆ ಪ್ರಾಯೋಗಿಕವಾಗಿ ಸರ್ಕಾರದ ವತಿಯಿಂದ ಮೈಸೂರು ಕಾರ್ಖಾನೆ ನಡೆಸಲು ತೀರ್ಮಾನ. ದುರಸ್ತಿಗಾಗಿ 50 ಕೋಟಿ ರೂಗಳನ್ನು ಒದಗಿಸುವುದಲ್ಲದೆ ಹಣಕಾಸು ಸಂಸ್ಥೆಗಳಿಂದ ದುಡಿಯುವ ಬಂಡವಾಳವನ್ನು ಪಡೆಯಲು ವ್ಯವಸ್ಥೆ
- ಕಲಬುರ್ಗಿ ಮತ್ತು ವಿಜಯಪುರದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಅನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಕೆ. ಬಳ್ಳಾರಿಯಲ್ಲಿ ಜೀನ್ಸ್ ಮತ್ತು ಉಡುಪುಗಳನ್ನು ಉತ್ತೇಜಿಸಲು ಟೆಕ್ಸ್‌ಟೈಲ್ ಪಾರ್ಕ್ ಪ್ರಾರಂಭಿಸಲು ಉದ್ದೇಶ
- ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಹಾಗೂ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನಲ್ಲಿ ನೂತನ ಜವಳಿ ಪಾರ್ಕ್ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲು ತೀರ್ಮಾನ. ಈ ಮೂಲಕ 5,000 ಉದ್ಯೋಗ ಸೃಷ್ಟಿ ಗುರಿ
- ಕಲಬುರ್ಗಿ ಜಿಲ್ಲೆಯ ಪ್ರಸಿದ್ಧ ಶಹಾಬಾದ್ ಕಲ್ಲನ್ನ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಅಳವಡಿಸಿ ವ್ಯಾಪಕ ಮಾರುಕಟ್ಟೆ ಅವಕಾಶ ಒದಗಿಸಲು ತೀರ್ಮಾನ. ಇದೇ ಮಾದರಿಯಲ್ಲಿ ಇಳಕಲ್ ಗ್ರಾನೈಟ್, ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಶಿಲ್ಪಕಲೆ ಮತ್ತು ಚಳ್ಳಕೆರೆಯಲ್ಲಿ ಖಾದ್ಯತೈಲ ಉದ್ಯಮಗಳಿಗೆ ಪ್ರೋತ್ಸಾಹಿಸಲು ಕ್ರಮ
- ಏಪ್ರಿಲ್ ಡಿಸೆಂಬರ್ 2021 ರ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಹೂಡಿಕೆಯ ಹರಿವಿನ ಪ್ರಮಾಣದಲ್ಲಿ ಕರ್ನಾಟಕದ 40ರಷ್ಟನ್ನು ಆಕರ್ಷಿಸಿದ್ದು ರಾಷ್ಟ್ರದಲ್ಲಿ ಅಗ್ರಸ್ಥಾನದಲ್ಲಿದೆ.
- ಕೇಂದ್ರ ಸರ್ಕಾರದ 76 ಸಾವಿರ ಕೋಟಿ ರೂ.ಗಳ ವೆಚ್ಚದ ಸೆಮಿಕಂಡಕ್ಟರ್ ಭಾರತ ಅಭಿಯಾನದ ಗರಿಷ್ಠ ಲಾಭ ಪಡೆದುಕೊಂಡು ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗೆ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯ ಸರ್ಕಾರದ ವತಿಯಿಂದ ವಿಶೇಷ ಪ್ರೋತ್ಸಾಹ ನೀಡಲು ಉದ್ದೇಶ.
ಇದನ್ನೂ ಓದಿ:ರಾಜ್ಯ ಬಜೆಟ್ 2022-23: ನೀರಾವರಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಕೊಟ್ಟ ಬೊಮ್ಮಾಯಿ