ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಣಕ್ಕೆ ಮಹಿಳಾ ಸಬಲೀಕರಣ ಅಂದ್ರೆ ಬೆಳಗಾವಿಯ ಬೇನಾಮಿ ಅಧ್ಯಕ್ಷೆ ಮಾತ್ರ. ಲಕ್ಷ್ಮಿ ಜಪ ಮಾಡುವುದೇ ಮಹಿಳಾ ಸಬಲೀಕರಣವೇ? ಎಂದು ಬಿಜೆಪಿ ವ್ಯಂಗ್ಯವಾಡಿದೆ. ಪರಿಷತ್ಗೆ ಮಹಿಳಾ ಅಭ್ಯರ್ಥಿ ಆಯ್ಕೆ ಮಾಡದಿರುವ ಕಾಂಗ್ರೆಸ್ ನಡೆಯನ್ನು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.
ಉತ್ತರಪ್ರದೇಶ - ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ. ಆದರೆ, ಕರ್ನಾಟಕದಲ್ಲಿ ಮಹಿಳಾ ಸಬಲೀಕರಣ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಒಬ್ಬ ಮಹಿಳಾ ಅಭ್ಯರ್ಥಿಯನ್ನು ಪರಿಷತ್ತಿಗೆ ಆಯ್ಕೆ ಮಾಡಿಲ್ಲ. ಮಹಿಳಾ ಸಬಲೀಕರಣ ಬರೀ ಭಾಷಣಕ್ಕೆ ಸೀಮಿತವೇ?, ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ, ಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ 'ಲಕ್ಷ್ಮಿ'ಗೆ ಮಾತ್ರ ಗೌರವ. ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು? ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಕಲ್ಯಾಣ ಕರ್ನಾಟಕ ಭಾಗವಾದ ಕೊಪ್ಪಳ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದ ಹೇಮಲತಾ ನಾಯಕ್ ಅವರನ್ನು ಬಿಜೆಪಿ ಗುರುತಿಸಿದೆ. ತಳಮಟ್ಟದ ಕಾರ್ಯಕರ್ತರನ್ನು ನಮ್ಮ ಪಕ್ಷ ಮುಂಚೂಣಿಯಲ್ಲಿ ನಿಲ್ಲಿಸಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು ನಮಗೆ ಕೇವಲ ಬಾಯಿ ಮಾತಿನ ಘೋಷಣೆಯಲ್ಲ.