ಬೆಂಗಳೂರು:ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ರಾಜಸ್ಥಾನದ ಘಟನೆಯೇ ಸಾಕ್ಷಿ. ಐಸಿಸ್ ಮಾದರಿಯಲ್ಲಿ ಹತ್ಯೆ ನಡೆಸಿರುವ ಈ ಉಗ್ರರನ್ನು ಗಲ್ಲಿಗೇರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಭಯೋತ್ಪಾದಕ ಕಾಂಗ್ರೆಸ್ ಹ್ಯಾಷ್ ಟ್ಯಾಗ್ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವೇ ಒಂದು ಭಯೋತ್ಪಾದಕ ಪಕ್ಷ. ಮತಾಂಧರ ಓಲೈಕೆಯೇ ಕಾಂಗ್ರೆಸ್ಸಿಗರ ಮೂಲ ಧ್ಯೇಯ. ಇಂತಹ ಅಮಾನವೀಯ ಕೃತ್ಯ ನಡೆದಾಗ ಕಾಂಗ್ರೆಸ್ ಮೌನಕ್ಕೆ ಶರಣಾಗುವುದೇಕೆ? ಬದುಕುವ ಹಕ್ಕಿನ ಬಗ್ಗೆ ಬೊಬ್ಬೆ ಹಾಕುವವರು ಈಗೆಲ್ಲಿದ್ದಾರೆ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷ ಚಿಂತನ ಶಿಬಿರ ಆಯೋಜಿಸಿದ ರಾಜ್ಯದಲ್ಲೇ ಇಂತಹ ಘೋರ ಘಟನೆ ನಡೆದಿದೆ. ಭಾರತ್ ಜೋಡೋ ಎಂದ ನಾಡಿನಲ್ಲೇ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಂಗ್ರೆಸಿಗರೇ, ಹಿಂದೂಗಳನ್ನು ಹತ್ಯೆ ಮಾಡಿ ಅವರ ಕಳೇಬರದಲ್ಲಿ ಭಾರತವನ್ನು ಜೋಡಿಸುತ್ತೀರಾ? ಹತ್ಯೆ, ನರಮೇಧಗಳು ನಡೆದಾಗ ಕಾಂಗ್ರೆಸ್ ಪಕ್ಷದ ಅನುಕಂಪದ ರಾಜಕಾರಣ ಸೆಲೆಕ್ಟಿವ್ ಆಗಿರುತ್ತದೆ. ನೆತ್ತರಿನಲ್ಲೂ ಧರ್ಮ ಹುಡುಕುವ ಏಕೈಕ ಪಕ್ಷವೆಂದರೆ ಅದು, ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದೆ.
ಹಿಂದೂ ಅಸ್ಮಿತೆಗಳ ಬಗ್ಗೆ ಕುಹಕವಾಡಿರುವ ಪತ್ರಕರ್ತನ ಬಂಧನವನ್ನು ಖಂಡಿಸುವ ಸಿದ್ದರಾಮಯ್ಯ ಈಗ ಮೌನಿ ಬಾಬಾ ಆಗಿದ್ದಾರೆ. ರಾಜಸ್ಥಾನದಲ್ಲಿ ನಡೆದ ಕೊಲೆಯನ್ನು ಮತಾಂಧರು ನಡೆಸಿದ್ದಾರೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಈ ಮೌನ ಅಲ್ಲವೇ?, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಶಾಂತಿ ವ್ಯವಸ್ಥೆ ಕುಂಠಿತಗೊಳ್ಳುತ್ತದೆ ಎನ್ನುವುದಕ್ಕೆ ರಾಜಸ್ಥಾನ ಉದಾಹರಣೆಯಾಗಿದೆ.
ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಅತಿಯಾದ ಮುಸ್ಲಿಂ ಓಲೈಕೆಯ ಫಲವಾಗಿ ಮತಾಂಧರು ಉದಯಪುರ್ ಕನ್ಹಯ್ಯ ಲಾಲ್ ಎಂಬ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಇದೇನು ಹೊಸದಲ್ಲ. ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರೇಶ್ ಮೇಸ್ತಾ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ರುದ್ರೇಶ್ ಅವರಂತಹ ಹಿಂದೂ ಕಾರ್ಯಕರ್ತರ ಕೊಲೆ ನಡೆದಿತ್ತು. ಇವೆಲ್ಲ ಕಾಂಗ್ರೆಸ್ ಪಕ್ಷದ ಅತಿಯಾದ ತುಷ್ಟಿಕರಣದ ನೇರ ಪ್ರಭಾವದಿಂದ ಆಗಿರುವ ದಾರುಣ ಹತ್ಯೆಗಳು ಎಂದು ಬಿಜೆಪಿ ಕಿಡಿಕಾರಿದೆ.
ಸಚಿವ ಆರ್.ಅಶೋಕ್ ತೀವ್ರ ಆಕ್ರೋಶ:ರಾಜಸ್ಥಾನದಲ್ಲಿ ಬಿಜೆಪಿಯ ಮಾಜಿ ವಕ್ತಾರರಿಗೆ ಬೆಂಬಲ ನೀಡಿದ ಎನ್ನುವ ಕಾರಣಕ್ಕೆ ಟೈಲರ್ ಒಬ್ಬನನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಕ್ಕೆ ಕಂದಾಯ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಸರ್ಕಾರ ಆದಷ್ಟು ಬೇಗ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ಘಟನೆ ಇನ್ನು ನಡೆಯಬಾರದು, ಅಂತಹ ಶಿಕ್ಷೆ ನೀಡಬೇಕು. ಈವರೆಗೆ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮಾತ್ರ ಇಂತಹ ಪ್ರಕರಣ ನಡೆಯುತ್ತಿತ್ತು. ಆದರೆ ಈಗ ನಮ್ಮಲ್ಲಿಯೂ ಇಂತಹದ್ದು ನಡೆಯುತ್ತಿರುವುದು ದುರದೃಷ್ಟಕರ. ರಾಜಸ್ಥಾನ ಸರ್ಕಾರ ಯಾವುದು ಸಬೂಬು ಹೇಳದೇ ಕಾರ್ಯ ನಿರ್ವಹಿಸಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಖಂಡಿತ ಉಗ್ರ ಕ್ರಮ ಕೈಗೊಳ್ಳುತ್ತದೆ. ಇದು ಜನಸಾಮಾನ್ಯರು ಭಯ ಪಡುವಂತಹುದು. ಇಂತಹ ಹೇಯಕೃತ್ಯವನ್ನು ನಾನು ಖಂಡಿಸುತ್ತೇನೆ. ಮೃತರಿಗೆ ನ್ಯಾಯ ಸಿಗಲೇಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ನಿರಾಣಿ ಪ್ರಶ್ನೆ:ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬುವುದಕ್ಕೆ ರಾಜಸ್ಥಾನದಲ್ಲಿ ನಡೆದ ಬರ್ಬರ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ. ಇಸ್ಲಾಮಿಕ ಮೂಲಭೂತವಾದಿಗಳ ಕ್ರೂರ ಮನಸ್ಥಿತಿಗೆ ಅಮಾಯಕ ಜೀವ ಬಲಿಯಾಗಿದೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರೇ ಇದಕ್ಕೆ ನಿಮ್ಮ ಉತ್ತರವೇನು?, ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ವ್ಯಕ್ತಿಯ ಶಿರಚ್ಚೇದಿಸಿ, ಪ್ರಧಾನಿಗೆ ಬೆದರಿಕೆ ಹಾಕಿದ್ದ ಹಂತಕರ ಬಂಧನ; ಉದಯಪುರದಲ್ಲಿ ನಿಷೇಧಾಜ್ಞೆ