ಬೆಂಗಳೂರು: ಬಜೆಟ್ ಬಹಿಷ್ಕಾರ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ನಡೆಯನ್ನು ಟೀಕಿಸಿರುವ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ವಲಸೆ ನಾಯಕ ಸಿದ್ದರಾಮಯ್ಯ ಅವರೇ, ನಿಮ್ಮ ಈ ಸಾಧನೆಯನ್ನು ರಾಜ್ಯದ ಜನತೆ ಮರೆತಿಲ್ಲ. ಕಲಾಪ ಬಹಿಷ್ಕಾರ ನಿಮ್ಮ ದುರಹಂಕಾರ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ. ರಾಜ್ಯದ ಇತಿಹಾಸದಲ್ಲಿ ಬಜೆಟ್ ಕಲಾಪ ಬಹಿಷ್ಕರಿಸಿದ್ದು ಇದೇ ಮೊದಲಾಗಿದ್ದು, ಇದಕ್ಕೆ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ ಎಂದು ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಸಿದ್ದರಾಮಯ್ಯ ಅವರೇ, ನೀವ್ಯಾವ ಸಾಧನೆ ಮಾಡಿದ್ದೀರೆಂದು ಸಂತೋಷಗೊಂಡಿದ್ದೀರಿ. ಸಂವಿಧಾನ, ಪ್ರಜಾಪ್ರಭುತ್ವವನ್ನು ಧಿಕ್ಕರಿಸಿದ್ದು ನಿಮ್ಮ ಸಂತೋಷಕ್ಕೆ ಕಾರಣವೇ? ಜನವಿರೋಧಿ ಆಡಳಿತ ಮಾಡಿಕೊಂಡು ಬಂದ ಕಾಂಗ್ರೆಸ್ ಪಕ್ಷದಿಂದ ಪ್ರಜಾಪ್ರಭುತ್ವ, ಸದನದ ಬಗ್ಗೆ ಘನತೆ, ಗೌರವವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸಭಾತ್ಯಾಗ
- ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ವೇಳೆ ಸಭಾತ್ಯಾಗ
- ಕೃಷಿ ಕಾಯ್ದೆ ಮಂಡಿಸುವಾಗ ಸಭಾತ್ಯಾಗ
- ಭೂ ಸುಧಾರಣಾ ಕಾಯ್ದೆ ಮಂಡಿಸುವಾಗಲೂ ಪಲಾಯನ
- ಬಜೆಟ್ ಮಂಡಿಸುವಾಗಲೂ ಸಭಾತ್ಯಾಗ
ಚರ್ಚೆಗೆ ಅವಕಾಶ ನೀಡಿದಾಗ ಚರ್ಚೆ ಮಾಡದ ಕಾಂಗ್ರೆಸ್ ಪಲಾಯನವಾದ ಅನುಸರಿಸುತ್ತಿದೆ. ಇದು ಯಾವ ಸೀಮೆಯ ವಿಪಕ್ಷ ಕಾರ್ಯವೈಖರಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಪ್ರಶ್ನಿಸಿದೆ.