ಬೆಂಗಳೂರು: ಬಿಜೆಪಿ ಭರ್ಜರಿ ಜಯಭೇರಿ ಕಂಡಿರುವ ಹಿನ್ನೆಲೆ ಮಲ್ಲೇಶ್ವರಂ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯ್ತು. ಗೃಹ ಸಚಿವ ಬೊಮ್ಮಯಿ, ಗೆದ್ದ ಅಭ್ಯರ್ಥಿ ಗೋಪಾಲಯ್ಯ, ಆರ್ ಅಶೋಕ್ , ಅರವಿಂದ ಲಿಂಬಾವಳಿ ಸೇರಿದಂತೆ ಮುಂತಾದ ಬಿಜೆಪಿಯ ಮುಖಂಡರು ಭಾಗಿಯಾಗಿದ್ರು.
ಸಿಎಂ ಯಡಿಯೂರಪ್ಪ ಮಾತನಾಡಿ, ನಾವು 12 ಸೀಟು ಗೆದ್ದು ದಾಖಲೆ ನಿರ್ಮಾಣ ಮಾಡಿದ್ದೇವೆ. ಮುಂದಿನ ಮೂರುವರೇ ವರ್ಷದಲ್ಲಿ ಉತ್ತಮ ಆಡಳಿತ ಕೊಡುತ್ತೇವೆ. ಬೆಂಗಳೂರನ್ನ ಮಾದರಿ ನಗರವಾಗಿ ಮಾಡಿ ಮೂರು ತಿಂಗಳಲ್ಲಿ ಸಂಪೂರ್ಣ ಸ್ಥಿತಿ ಗತಿ ಬದಲಾವಣೆ ಮಾಡ್ತಿವಿ. ನಾವು ಇಷ್ಟು ಪ್ರಮಾಣದಲ್ಲಿ ಗೆಲುವು ಸಾಧಿಸಿದ್ದಿವಿ, ಅಂದ್ರೆ ಕಾಂಗ್ರೆಸ್ ಜೆಡಿಎಸ್ ಸ್ಥಿತಿ ಏನಾಗಿರಬೇಕು ನೋಡಿ, ಮುಂದಿನ ಬಜೆಟ್ ನಲ್ಲಿ ರೈತಪರ, ಅಭಿವೃದ್ಧಿ ಪರ ಯೋಜನೆಗಳನ್ನು ನೀಡ್ತಿವಿ. ಇವತ್ತಿನ ಫಲಿತಾಂಶಕ್ಕೆ ಪ್ರಧಾನಿ ಮೋದಿ ಕೂಡ ಕಾತುರರಾಗಿದ್ದರು ಎಂದು ತಿಳಿಸಿದರು.
ಆರ್ ಅಶೋಕ್ ಮಾತನಾಡಿ, ಶಾಸಕರಿಗೆ ಕಾಂಗ್ರೆಸ್ ನವರು ಅನರ್ಹರು ಎಂಬ ಬಿರುದು ಕೊಟ್ಟಿದ್ದರು. ಇವತ್ತು ಬಿಜೆಪಿ ಸರ್ಕಾರ ಸೇಫ್ ಅಗುವಂತ ತೀರ್ಪು ಜನ ಕೊಟ್ಟಿದ್ದಾರೆ. ಅವರಲ್ಲಿ ಹೊಂದಾಣಿಕೆ ಮತ್ತು ಕಾರ್ಯಕರ್ತರಲ್ಲಿ ಸ್ಪಿರಿಟ್ ಇರಲಿಲ್ಲ. ಅದ್ರೆ ಬಿಜೆಪಿಯಲ್ಲಿ ಸ್ಪಿರಿಟ್ ಇತ್ತು. ಹೊಸಕೋಟೆಯಲ್ಲಿ ಗೆಲ್ಲಬೇಕಿತ್ತು, ಅದ್ರೆ ನಮ್ಮ ಪಕ್ಷದವರೇ ದ್ರೋಹ ಬಗೆದ ಹಿನ್ನೆಲೆ ಸೋತ್ತಿದ್ದೇವೆ, ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳತ್ತೆ ಎಂದರು.
ಇನ್ನು ಉಪಚುನಾವಣಾ ಉಸ್ತುವಾರಿ ಅರವಿಂದ ಲಿಂಬಾವಳಿ ಮಾತಾಡಿ ಕೆ.ಆರ್. ಪೇಟೆ ಕ್ಷೇತ್ರಕ್ಕೆ ವಿಜಯೇಂದ್ರರನ್ನು ಉಸ್ತುವಾರಿಯಾಗಿ ನೇಮಿಸಬೇಕು ಎಂಬ ಅಭಿಪ್ರಾಯ ಪಕ್ಷದಲ್ಲಿ ಕೇಳಿ ಬಂತು. ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ ಎಂದು ನಾವು ಸಂಘಟನಾ ಸಭೆಯಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಅದರಂತೆ ಇಂದು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿದೆ, ಚಿಕ್ಕಬಳ್ಳಾಪುರದಲ್ಲಿ ಕೂಡಾ ಬಿಜೆಪಿ ಗೆದ್ದಿದೆ. ಬಹಳ ವರ್ಷಗಳ ಬಳಿಕ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷಗಳ ಆಡಳಿತ ಬರುತ್ತಿದೆ ಎಂದು ಖುಷಿ ಪಟ್ಟರು.