ಬೆಂಗಳೂರು:ಪ್ರತಿ ಬೂತ್ನಲ್ಲಿ ಶೇ.50ರಷ್ಟು ಮತಗಳನ್ನು ಸೆಳೆಯುವಂತೆ ಬೂತ್ಗಳ ಬಲವರ್ಧನೆ ಮಾಡಬೇಕು. ಅದಕ್ಕಾಗಿ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ತಿಂಗಳಿನಲ್ಲಿ 15 ದಿನ ಪ್ರವಾಸ ಮಾಡಬೇಕು ಎಂದು ಪದಾಧಿಕಾರಿಗಳಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆಯಿತು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಸಭೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬಿಜೆಪಿ ದುರ್ಬಲ ಇರುವ ವಿಧಾನಸಭೆ ಕ್ಷೇತ್ರಗಳಲ್ಲಿ ಸಿಎಂ ಪ್ರವಾಸ ಮಾಡಬೇಕು, ಸೆಪ್ಟೆಂಬರ್ ಮೊದಲ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ ಜನೋತ್ಸವ ಸಮಾವೇಶಗಳನ್ನು ನಡೆಸಬೇಕು. ಒಟ್ಟು 7 ಬೃಹತ್ ಜಿಲ್ಲಾ ಸಮಾವೇಶಗಳನ್ನು ನಡೆಸಬೇಕು. ತಲಾ 50 ವಿಧಾನಸಭೆ ಕ್ಷೇತ್ರಗಳಲ್ಲಿ ಮೂರು ತಂಡಗಳಿಂದ ಪ್ರವಾಸ ಮಾಡಬೇಕು, ಸಿಎಂ ನೇತೃತ್ವದಲ್ಲಿ ಒಂದು ತಂಡ, ಕಟೀಲ್ ನೇತೃತ್ವದಲ್ಲಿ ಮತ್ತೊಂದು ತಂಡ, ಯಡಿಯೂರಪ್ಪ ನೇತೃತ್ವದಲ್ಲಿ ಇನ್ನೊಂದು ತಂಡ ಪ್ರವಾಸ ಮಾಡಬೇಕು ಎಂದು ತಿಳಿಸಿದರು.
(ಇದನ್ನೂ ಓದಿ: ಬಿಜೆಪಿಯಲ್ಲಿ ಯಡಿಯೂರಪ್ಪಗೆ ಉನ್ನತ ಸ್ಥಾನಮಾನ.. ಹೈಕಮಾಂಡ್ನಿಂದ ಡ್ಯಾಮೇಜ್ ಕಂಟ್ರೋಲ್ ಹೆಜ್ಜೆ)
ಈ ಕುರಿತು ರಾಜ್ಯ ವಕ್ತಾರ ಎಂ ಜಿ ಮಹೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರತಿ ಬೂತ್ಗಳನ್ನು ಬಲಪಡಿಸಬೇಕು. ಶೇ.50 ರಷ್ಟು ಮತ ಪಕ್ಷಕ್ಕೆ ಬರುವಂತೆ ಬೂತ್ಗಳ ಸದೃಢಗೊಳಿಸಬೇಕು. ಇದಕ್ಕಾಗಿ ಪದಾಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕಿದೆ, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ತಿಂಗಳಿನಲ್ಲಿ 15 ದಿನ ಪ್ರವಾಸ ಮಾಡಿ ಬೂತ್ ಮಟ್ಟ ಬಲಪಡಿಸಬೇಕು ಎಂದು ಅರುಣ್ ಸಿಂಗ್ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.