ಬೆಂಗಳೂರು : ಮೈತ್ರಿ ಸರ್ಕಾರದ ಅವಧಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಒದಗಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ರಾಜ್ಯ ಸರ್ಕಾರ ಕಾಮಗಾರಿಗಳನ್ನು ಸ್ಥಗಿತಗೊಳಿಸಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಲು ಜೆಡಿಎಸ್ ಶಾಸಕರು ನೀಡಿದ್ದ ನಿಲುವಳಿ ಸೂಚನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಿಯಮ 69ಕ್ಕೆ ಬದಲಾಯಿಸಿ ನಾಳೆ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು.
ಪ್ರಶ್ನೋತ್ತರ ಅವಧಿ ಮುಗಿದ ನಂತರ ಜೆಡಿಎಸ್ ಸದಸ್ಯರಾದ ಹಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ ಮತ್ತಿತರು ವಿಷಯ ಪ್ರಸ್ತಾಪಿಸಲು ಮುಂದಾದಾಗ, ನೀವು ನೀಡಿರುವ ನಿಲುವಳಿ ಸೂಚನೆ 2 ಬಾರಿ ಚರ್ಚೆಯಾಗಿದೆ. ಈ ವಿಚಾರವನ್ನು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಲು ಅವಕಾಶವಿದೆ. ಹೀಗಾಗಿ ನಿಯಮ 60 ರ ಬದಲಾಗಿ ನಿಯಮ 69ರಡಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.