ಬೆಂಗಳೂರು :ಹಿಂದಿನ ಮುಖ್ಯಮಂತ್ರಿ ಮತ್ತು ಈಗಿನ ಮುಖ್ಯಮಂತ್ರಿಯವರು ಹಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದ್ದರೂ ಆರ್ಥಿಕ ಇಲಾಖೆ 35 ಲಕ್ಷ ಹಣ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಶಿವಾನಂದ ಎಸ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ನಿರ್ದೇಶನ ಕೊಟ್ರೂ 35 ಲಕ್ಷ ರೂ. ಬಿಡುಗಡೆ ಮಾಡದಿರಲು ಕಾರಣವೇನೆಂದ ಶಾಸಕ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪ ವೇಳೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ನೀಡಿದ ಉತ್ತರಕ್ಕೆ ತೃಪ್ತರಾಗದ ಅವರು, ಯುಜಿಡಿ ಮಾರ್ಗಕ್ಕೆ ಸಂಬಂಧಿಸಿದಂತೆ ಕಾಮಗಾರಿಗೆ 35 ಲಕ್ಷ ರೂ. ಹೆಚ್ಚುವರಿ ಬಿಡುಗಡೆ ಮಾಡುವಂತೆ ಸಚಿವರು, ಮುಖ್ಯಮಂತ್ರಿಗಳಿಬ್ಬರೂ ಬರೆದಿದ್ದಾರೆ. ಆದರೆ, ಆರ್ಥಿಕ ಇಲಾಖೆ ಹಣ ಬಿಡುಗಡೆ ಮಾಡಿಲ್ಲ.
ಆರ್ಥಿಕ ಇಲಾಖೆ ಕಾರ್ಯದರ್ಶಿ ನಿಮ್ಮ ನಿಯಂತ್ರಣದಲ್ಲಿಲ್ಲವೇ ಎಂದು ಪ್ರಶ್ನಿಸಿದರು. ಸಂಪತ್ಭದರಿತ ರಾಜ್ಯ ಎಂದು ಹೇಳಲಾಗುತ್ತದೆ. ಆದರೆ, ಹಣ ಬಿಡುಗಡೆಯಾಗುವುದಿಲ್ಲ. ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಕಾರ್ಯದರ್ಶಿಯವರೇ ಸದನಕ್ಕೆ ಉತ್ತರ ಹೇಳಲಿ ಎಂದು ಆಕ್ರೋಶ ಹೊರ ಹಾಕಿದರು.
ವಿಳಂಬ ಮಾಡುವುದಿಲ್ಲ :ಕಾರ್ಯಾದೇಶ ನೀಡಿದ ನಂತರ ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗದಂತೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಜನಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಎನ್ ಹೆಚ್ ಶಿವಶಂಕರ ರೆಡ್ಡಿ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಉತ್ತರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸಚಿವ ಕಾರಜೋಳ ಅವರು, ಯಾವುದೇ ಕಾಮಗಾರಿಗೆ ಕಾರ್ಯಾದೇಶ ನೀಡಿದ ನಂತರ ಕಾಮಗಾರಿ ಶಂಕು ಸ್ಥಾಪನೆ ವಿಳಂಬವಾಗಬಾರದು. ವಿಳಂಬವಾದರೆ ಕಾಮಗಾರಿ ವೆಚ್ಚ ಹೆಚ್ಚಾಗಲಿದೆ. ಈ ಬಗ್ಗೆ ಪರಿಶೀಲಿಸಿ ವಿಳಂಬವಾಗದಂತೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಶಿವಶಂಕರ ರೆಡ್ಡಿ, ಕಾರ್ಯಾದೇಶ ನೀಡಿ ಆರು ತಿಂಗಳಾದರೂ ಕೆಲಸ ಪ್ರಾರಂಭವಾಗಿಲ್ಲ. ಕಾರ್ಯಾದೇಶ ನೀಡಿದ ನಂತರ ಒಂದು ತಿಂಗಳಲ್ಲಿ ಸಂಬಂಧಪಟ್ಟ ಸಚಿವರು ಶಂಕು ಸ್ಥಾಪನೆ ಮಾಡದಿದ್ದರೆ ಆಯಾ ಕ್ಷೇತ್ರದ ಶಾಸಕರೇ ಶಂಕು ಸ್ಥಾಪನೆ ನೆರವೇರಿಸಲು ಅವಕಾಶ ನೀಡಿ ಎಂದು ಸಲಹೆ ಮಾಡಿದರು.
ಈ ಸಲಹೆ ಸರಿಯಾಗಿದೆ ಎಂದು ಹೇಳಿದ ಸ್ಪೀಕರ್, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಗೋವಿಂದ ಕಾರಜೋಳ ಅವರಿಗೆ ಈ ಸಲಹೆ ಗಮನಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಿ ಎಂದು ಹೇಳಿದರು.
ಶಾಸಕರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಎಂಟಿಬಿ ನಾಗರಾಜ್, ಗೌರಿಬಿದನೂರು ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಲು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಫೆಬ್ರವರಿ 25ರಂದು ಕಾರ್ಯಾದೇಶ ನೀಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ವಿಳಂಬವಾಗಿದೆ. ಈಗಾಗಲೇ ಕಾಮಗಾರಿ ಸ್ಥಳವನ್ನು ಗುತ್ತಿಗೆದಾರರಿಗೆ ಜೂನ್ 22ರಂದು ಹಸ್ತಾಂತರಿಸಲಾಗಿದೆ. ವಿಳಂಬಕ್ಕೆ ಆಸ್ಪದ ನೀಡದಂತೆ ಕಾಮಗಾರಿಯನ್ನು ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಗಿತ :ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಈಗಾಗಲೇ ಖಾಸಗಿಯವರಿಗೆ ಮಾರಾಟ ಮಾಡಿರುವುದರಿಂದ ಕಾರ್ಖಾನೆ ಸ್ಥಗಿತಗೊಂಡಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಅವರು, ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಜೆ.ಎನ್.ಗಣೇಶ್ ಅವರ ಪ್ರಶ್ನೆಗೆ ಉತ್ತರಿಸಿದರು. ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯು 1955ರಲ್ಲಿ ನೋಂದಣಿಯಾಗಿ 1958ರಿಂದ ಪ್ರಾರಂಭವಾಗಿದೆ.
176.51 ಎಕರೆ ಜಮೀನು ಹೊಂದಿದೆ. ಕಾರ್ಖಾನೆ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆ ಕಾರ್ಖಾನೆಯನ್ನು ಸಮಾಪನೆಗೊಳಿಸಿ ಸಮಾಪನ ಅಧಿಕಾರಿಗಳನ್ನು ನೇಮಿಸಲಾಗಿದೆ. ಸುಂದರಿ ಶುಗರ್ಸ್ ಕಂಪನಿಗೆ ಮಾರಾಟ ಮಾಡಲಾಗಿದೆ. ಮಾರಾಟದ ಕರಾರಿನಲ್ಲಿ ಖರೀದಿದಾರರು ಸ್ಥಳದಲ್ಲೇ ಕಾರ್ಖಾನೆ ನಡೆಸಬೇಕೆಂಬ ನಿಬಂಧನೆ ಇದೆ. ಆದರೂ ಕಬ್ಬು ಅರೆಯುವ ಕಾರ್ಯವನ್ನು ನಿರ್ವಹಿಸಿಲ್ಲ.
ಯಂತ್ರೋಪಕರಣಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ಎಂಬ ದೂರು ಕೇಳಿ ಬಂದಿದ್ದವು. ಹೀಗಾಗಿ, ಕಾರ್ಖಾನೆಯ ಜಮೀನು ಮಾರಾಟ ಒಪ್ಪಂದವನ್ನು ರದ್ದುಪಡಿಸಿ ಕಾರ್ಖಾನೆ ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ವಿವಿಧ ಮಠಾಧೀಶರು ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು ಎಂದು ಹೇಳಿದರು.
ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಬಂದ್ ಬಗ್ಗೆ ಸದನದಲ್ಲಿ ಮಾತನಾಡಿದ ಶಾಸಕ ಜೆಎನ್ ಗಣೇಶ್
ಸರ್ಕಾರಿ ಸೌಲಭ್ಯಗಳ ದುರುಪಯೋಗವಾಗಿದ್ದರೆ ಮಾಹಿತಿ ನೀಡಿ :ಬಂಗಾರಪೇಟೆ ತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಸರ್ಕಾರಿ ಸೌಲಭ್ಯಗಳು ದುರುಪಯೋಗವಾಗಿರುವ ಮಾಹಿತಿ ಕೊಟ್ಟರೆ 24 ಗಂಟೆಯೊಳಗೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಹೆಚ್ ಎನ್ ನಾರಾಯಣಸ್ವಾಮಿ ಅವರ ಪ್ರಶ್ನೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಆಚಾರ್ ಹಾಲಪ್ಪ ಬಸಪ್ಪ ಅವರ ಪರವಾಗಿ ಉತ್ತರಿಸಿದ ಸಚಿವರು, ಬಂಗಾರಪೇಟೆಯ ಅಂಗನವಾಡಿಗಳಲ್ಲಿ ನೀಡುವ ಸರ್ಕಾರಿ ಸೌಲಭ್ಯಗಳು ದುರುಪಯೋಗವಾಗಿಲ್ಲ. ದುರುಪಯೋಗವಾಗಿರುವುದು ಶೇ.100ರಷ್ಟು ಖಚಿತ ಎಂದು ಹೇಳುತ್ತಿದ್ದಾರೆ.
ಖಚಿತ ಮಾಹಿತಿಯನ್ನು ಕೊಟ್ಟರೆ 24 ಗಂಟೆಯೊಳಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಂಗಾರಪೇಟೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತು ಪ್ರಥಮ ದರ್ಜೆ ಸಹಾಯಕರ ನಡುವೆ ಹೊಂದಾಣಿಕೆ ಇಲ್ಲ. ಒಬ್ಬರ ಮೇಲೆ ಮತ್ತೊಬ್ಬರು ದೂರು ನೀಡುವ ಪ್ರವೃತ್ತಿ ಇದೆ. ಇಬ್ಬರನ್ನು ಕೂಡ ಬೇರೆ ಜಿಲ್ಲೆ ಮತ್ತು ಬೇರೆ ತಾಲೂಕಿಗೆ ವರ್ಗಾವಣೆ ಮಾಡಲಾಗುವುದು ಎಂದರು.
ಮೂಲಸೌಲಭ್ಯಕ್ಕೆ ಶೀಘ್ರ ಹಣ ಬಿಡುಗಡೆ :ರಾಜ್ಯದ ನಗರಸಭೆ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸದ್ಯದಲ್ಲೇ ಹಣಕಾಸು ಬಿಡುಗಡೆ ಮಾಡುವುದಾಗಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ವಿಧಾನಸಭೆಗೆ ತಿಳಿಸಿದರು. ಶಾಸಕ ಜಿ ಟಿ ದೇವೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ 75 ಲಕ್ಷ ಹಾಗೂ ಪಟ್ಟಣ ಪಂಚಾಯತ್‌ಗಳಿಗೆ 30 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಈ ಅನುದಾನದಲ್ಲಿ ಬೇಕಾಗಿರುವ ಅಗತ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳ ಜೊತೆ ಸಭೆ ಕರೆಯಲಿದ್ದೇವೆ. ಎಲ್ಲೆಲ್ಲಿ ಹಣಕಾಸಿನ ಅಗತ್ಯವಿದೆಯೋ ಅಲ್ಲಿಗೆ ಆದ್ಯತೆ ಮೇರೆಗೆ ನೆರವು ನೀಡಲಾಗುವುದು ಎಂದು ತಿಳಿಸಿದರು.