ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಸಂಜೆ 7 ಗಂಟೆವರೆಗೆ ಹಾನಗಲ್ ಕ್ಷೇತ್ರದಲ್ಲಿ ಶೇ.84 ಹಾಗೂ ಸಿಂದಗಿ ಕ್ಷೇತ್ರದಲ್ಲಿ ಶೇ. 69 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಬಿಜೆಪಿ ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಹಾಗೂ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ನಿಧನದಿಂದ ತೆರವಾದ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗೆ ಮತದಾನ ನಡೆಯಿತು. ಎರಡೂ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು. ಆರಂಭದಲ್ಲಿ ಮತದಾನ ಪ್ರಕ್ರಿಯೆ ಮಂದಗತಿಯಲ್ಲಿ ನಡೆದರೂ ನಂತರ ಚುರುಕುಗೊಂಡಿತ್ತು. ಮತದಾನ ಶಾಂತಿಯುತವಾಗಿ ನಡೆದಿದೆ.
ಇದನ್ನೂ ಓದಿರಿ:T20 World Cup: ಬಟ್ಲರ್ ಅಬ್ಬರದ ಫಿಫ್ಟಿ... ಕಾಂಗರೂಗಳ ಮೇಲೆ ಇಂಗ್ಲೆಂಡ್ ಸವಾರಿ
ಹಾನಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀನಿವಾಸ್ ಮಾನೆ, ಜೆಡಿಎಸ್ ಅಭ್ಯರ್ಥಿಯಾಗಿ ನಿಯಾಜ್ ಶೇಖ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ ಸಜ್ಜನರ ಸೇರಿದಂತೆ 13 ಮಂದಿ ಕಣಕ್ಕಿಳಿದಿದ್ದರು.
ಹಾನಗಲ್ ಕ್ಷೇತ್ರದಲ್ಲಿ ಒಟ್ಟು 2,04,481 ಮತದಾರರಿದ್ದು, 1,05,525 ಪುರುಷರು, 98,953 ಮಹಿಳಾ ಮತದಾರರು ಇದ್ದರು.ಇನ್ನು ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರು, ಕಾಂಗ್ರೆಸ್‌ನಿಂದ ಅಶೋಕ್. ಎಂ. ಮನಗೂಳಿ, ಜೆಡಿಎಸ್‌ನಿಂದ ನಾಜಿಯಾ ಅಂಗಡಿ ಸೇರಿದಂತೆ 6 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,34,584 ಮತದಾರರಿದ್ದು, ಈ ಪೈಕಿ 1,20,844 ಪುರುಷರು, 1,13,561 ಮಹಿಳೆಯರು ಹಾಗೂ 32 ಇತರೆ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಎರಡು ಕ್ಷೇತ್ರಗಳ ಮತ ಎಣಿಕೆ ನ.2 ರಂದು ನಡೆಯಲಿದೆ.