ಕರ್ನಾಟಕ

karnataka

By

Published : Aug 25, 2020, 3:55 PM IST

ETV Bharat / city

ಅಂಗನವಾಡಿಗೆ ಸೂರು, ಸಮಸ್ಯೆಗಳು ನೂರು!

ಕಟ್ಟಡ ಮತ್ತು ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕಂದಮ್ಮಗಳು ನಲುಗುತ್ತಿವೆ. ಒಂದೊಂದು ಕಡೆ ಒಂದೊಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳ ಸಮರ್ಪಕ ನಿರ್ವಹಣೆಗೆ ಅಂಗನವಾಡಿ ಕಾರ್ಯಕರ್ತೆಯರು ಹೆಣಗಾಡುತ್ತಿದ್ದಾರೆ. ಅನುದಾನ ಕಾಲಕಾಲಕ್ಕೆ ಬಿಡುಗಡೆ ಆಗದಿರುವುದೇ ಅದಕ್ಕೆ ಕಾರಣ ಎನ್ನಲಾಗುತ್ತಿದೆ.

Karnataka Anganavadi centers problems
ಹಾಲು ಸೇವಿಸುತ್ತಿರುವ ಮಕ್ಕಳು

ಬೆಂಗಳೂರು:ರಾಜ್ಯದಲ್ಲಿ ಅಂಗನವಾಡಿಗಳ ಸ್ಥಿತಿಗತಿ ಬಹಳ ಶೋಚನೀಯವಾಗಿದೆ. ಎಷ್ಟೋ ಅಂಗನವಾಡಿಗಳಲ್ಲಿ ಮೂಲ ಸೌಲಭ್ಯಗಳು ಮಾತಿಗಷ್ಟೇ. ಅವುಗಳನ್ನು ನೋಡಿದರೆ ಯಾರೋ ವಾಸವಿದ್ದು ಬಿಟ್ಟು ಹೋದ ಹಳೆಯ ಮನೆಗಳಂತಿರುತ್ತವೆ. ಕೆಲವು ಕುಸಿಯುವ ಹಂತಕ್ಕೂ ತಲುಪಿವೆ. ಹೀಗಾಗಿ, ಭಯದಲ್ಲೇ ಮಕ್ಕಳು ಕಲಿಯಬೇಕಾಗಿದೆ. ಇಂದಿಗೂ ಸಹ ಸ್ವಂತ ಸೂರು ಸೇರಿದಂತೆ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಅಂಗನವಾಡಿ ಕೇಂದ್ರಗಳ ಕುರಿತ ವರದಿ ಇಲ್ಲಿದೆ.

ಕುಡಿಯಲು ಶುದ್ಧ ನೀರಿಲ್ಲ. ವಿದ್ಯುತ್‌ ಸಂಪರ್ಕವಿಲ್ಲ. ಕಿತ್ತುಹೋಗಿರುವ ನೆಲಹಾಸು, ಶಿಥಿಲಗೊಂಡಿರುವ ಕಟ್ಟಡಗಳು, ಬಿರುಕು ಬಿಟ್ಟ ಗೋಡೆಗಳು, ಬೀಳುವ ಸ್ಥಿತಿಯಲ್ಲಿರುವ ಕಿಟಕಿ-ಬಾಗಿಲು, ಬಯಲಲ್ಲೇ ಶೌಚಾಲಯ. ಇವು ಅಂಗನವಾಡಿ ಕೇಂದ್ರಗಳ ಸ್ಥಿತಿ-ಗತಿ. ಇಷ್ಟೆಲ್ಲಾ ಸಮಸ್ಯೆಗಳನ್ನು ನೋಡುತ್ತಿದ್ದರೆ ಮಹಿಳಾ ಮತ್ತು ಮಕ್ಕಳ ಇಲಾಖೆಯು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮಂತ್ರವನ್ನು ಮರೆತಿರಬಹುದೇ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ.

ಇಂದಿಗೂ ಸಹ ಸ್ವಂತ ಸೂರು ಸೇರಿದಂತೆ ನೂರಾರು ಸಮಸ್ಯೆಗಳನ್ನು ಅಂಗನವಾಡಿ ಕೇಂದ್ರಗಳು ಎದುರಿಸುತ್ತಿವೆ. ಬಹುತೇಕ ಕೇಂದ್ರಗಳಲ್ಲಿ ಮಕ್ಕಳಿಗೆ ಅವಶ್ಯಕ ಕಲಿಕಾ ಹಾಗೂ ಆಟಿಕೆ ಸಾಮಗ್ರಿ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಶಾಲಾ ಪೂರ್ವ ಶಿಕ್ಷಣ ಕಿಟ್​, ಪಿಠೋಪಕರಣ ಹಾಗೂ ಅಗತ್ಯ ಪೌಷ್ಟಿಕ ಆಹಾರದ ಕೊರತೆಯಿದೆ. ಇನ್ನು ಅಪೌಷ್ಟಿಕತೆ ನೀಗಿಸಲು ಜಾರಿಗೆ ತರಲಾಗಿರುವ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯು ಸಮರ್ಪವಾಗಿ ಬಳಕೆಯಾಗುತ್ತಿಲ್ಲ. ಇದರಿಂದಾಗಿ ಪುಟಾಣಿಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. ಬಹಳಷ್ಟು ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ.

ಅಂಗನವಾಡಿ ಸಮಸ್ಯೆಗಳ ಕುರಿತ ಸಮಗ್ರ ವರದಿ

ಇನ್ನು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಮಸ್ಯೆಗಳು ಮತ್ತಷ್ಟು ಭಿನ್ನವಾಗಿವೆ. ಕಾಲ ಕಾಲಕ್ಕೆ ವೇತನ ಸಿಗುತ್ತಿಲ್ಲ. ಅದಾದರೂ ಹೋಗಲಿ, ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಅನುದಾನವನ್ನೇ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ, ಸಿಬ್ಬಂದಿಯೇ ತಮ್ಮ ಕೈಯಿಂದ ಖರ್ಚು ಮಾಡಬೇಕಿದೆ. ಹೀಗೆ ನಮ್ಮ ಹಣದಿಂದಲೇ ನಾವೇ ಖರ್ಚು ಮಾಡುತ್ತಿದ್ದರೆ, ಕುಟುಂಬ ಪೋಷಣೆ ಹೇಗೆ ಎಂಬ ಆತಂಕ ಸಿಬ್ಬಂದಿಯಲ್ಲಿದೆ.

ಇನ್ನು ಕೆಲ ಅಂಗನವಾಡಿಗಳಿಗೆ ಆಹಾರ ಧಾನ್ಯ ಪೂರೈಕೆ ಬಹಳ ವಿಳಂಬವಾಗುತ್ತಿದ್ದು, ಮಕ್ಕಳು ಉಪವಾಸ ಇರಬೇಕಾಗಿದೆ. ಹೀಗೇ ಒಂದೊಂದು ಅಂಗನವಾಡಿ ಕೇಂದ್ರಗಳಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳ ಸಮಸ್ಯೆಗಳನ್ನು ಕೂಡಲೇ ಈಡೇರಿಸಬೇಕಿದೆ ಎಂದು ಸಂಘಟನೆಗಳು ಒತ್ತಾಯಿಸುತ್ತಿವೆ.

ABOUT THE AUTHOR

...view details