ಬೆಂಗಳೂರು: ಕೊರೊನಾ ಕಾರಣದಿಂದಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಪಾಸ್ ಮಾಡಲಾಗಿತ್ತು. ಇದೀಗ ಫಲಿತಾಂಶ ಪ್ರಕಟಕ್ಕೆ ಪಿಯು ಬೋರ್ಡ್ ಸಿದ್ಧತೆ ನಡೆಸುತ್ತಿದ್ದು, ಫಲಿತಾಂಶ ಹೇಗೆ ನೀಡಬೇಕು ಎಂದು ಉಂಟಾಗಿದ್ದ ಗೊಂದಲಗಳಿಗೆ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಸ್ಪಷ್ಟನೆ ನೀಡಿದ್ದಾರೆ.
ಪಿಯುಸಿ ಫಲಿತಾಂಶದ ಕುರಿತು ಮಾಹಿತಿ ನೀಡಿದ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಈ ಕುರಿತು ಮಾಹಿತಿ ನೀಡಿರುವ ಅವರು, ಫಲಿತಾಂಶ ನೀಡುವುದು ಪಿಯು ಬೋರ್ಡ್ಗೆ ದೊಡ್ಡ ಸವಾಲಾಗಿತ್ತು. ಪ್ರತಿ ವರ್ಷ ರಿಜಿಸ್ಟರ್ ನಂಬರ್ ಮೇಲೆ ಫಲಿತಾಂಶ ನೋಡಬಹುದಿತ್ತು. ಆದರೆ ಈ ಬಾರಿ ಪರೀಕ್ಷೆಯಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಿಜಿಸ್ಟರ್ ನಂಬರ್ ನೀಡಿಲ್ಲ. ಎಸ್.ಎಸ್.ಎಲ್.ಸಿ ಮೊದಲ ಪರೀಕ್ಷೆಯ ಮರುದಿನ ಪಿಯು ಫಲಿತಾಂಶ ಘೋಷಣೆ ಮಾಡಬೇಕು ಎಂದುಕೊಂಡಿದ್ದೇವೆ. ಜು20 ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.
ಈ ಬಾರಿ ಯಾವುದೇ ರ‍್ಯಾಂಕ್ ಇರುವುದಿಲ್ಲ, ಸಿಬಿಎಸ್‌ಇ ಮಾದರಿಯಲ್ಲಿ ಎಸ್ಎಸ್ಎಲ್‌ಸಿ, ಪಿಯು ಅಂಕ ಪರಿಗಣಿಸಿ ಫಲಿತಾಂಶ ನೀಡಲಿದ್ದೇವೆ. ಗ್ರೇಡ್ ಬದಲು ಅಂಕಗಳ ಆಧಾರದಲ್ಲಿ ಫಲಿತಾಂಶ ಹೊರಬರಲಿದೆ. ಯಾವುದೇ ಗೊಂದಲಗಳಾಗದಂತೆ ಫಲಿತಾಂಶ ನೀಡಲು ಪ್ರಯತ್ನಿಸಲಾಗುವುದು ಎಂದರು.
ಫಲಿತಾಂಶದ ಸಲುವಾಗಿ ವಿದ್ಯಾರ್ಥಿಗಳಿಗೆ ಬೋರ್ಡ್ ಹೊಸದಾಗಿ ರಿಜಿಸ್ಟರ್ ನಂಬರ್ ಜನರೇಟ್ ವ್ಯವಸ್ಥೆ ಮಾಡಿದೆ, Know My Number ಎಂದು ಪಿಯು ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು. ವಿದ್ಯಾರ್ಥಿಗಳಿಗೆ ಎಸ್ಎಂಎಸ್ ಹಾಗೂ ಆಯಾ ಕಾಲೇಜಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ. ಫಲಿತಾಂಶದ ಮುನ್ನ ತಮ್ಮ ರಿಜಿಸ್ಟರ್ ನಂಬರ್ ಅನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ನಂತರ ಜನರೇಟ್ ಆದ ರಿಜಿಸ್ಟರ್ ನಂಬರ್ ಚೆಕ್ ಮಾಡಿ ಖಚಿತಪಡಿಸಿಕೊಳ್ಳಬೇಕು. ಆನಂತರ ಜು.20 ರಂದು ವೆಬ್ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ ಸ್ನೇಹಲ್ ಮಾಹಿತಿ ನೀಡಿದರು.