ಬೆಂಗಳೂರು: 2022ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಐದು ಮಿನಿ ಸಮಾವೇಶಗಳನ್ನು ಅಮೆರಿಕದ ನಾನಾ ಕಡೆಗಳಲ್ಲಿ ನಡೆಸಲಾಗುವುದು. ಆ ದೇಶದಲ್ಲಿರುವ ಕನ್ನಡಿಗರು ತಮ್ಮ ವಾಣಿಜ್ಯ ವೇದಿಕೆಗಳ ಮೂಲಕ ಕರ್ನಾಟಕದಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಮುಂದಡಿ ಇಡಬೇಕು ಎಂದು ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Minister C. N. Ashwath Narayan) ಹೇಳಿದ್ದಾರೆ.
ಉತ್ತರ ಅಮೆರಿಕದಲ್ಲಿರುವ ಕನ್ನಡ ಕೂಟಗಳ ಆಗರವಾಗಿರುವ ''ಅಕ್ಕ ಸಂಘಟನೆ''ಯು(Association of Kannada Kootas of America) ಆಚರಿಸಿದ 66ನೇ ಕನ್ನಡ ರಾಜ್ಯೋತ್ಸವವನ್ನು(Kannada rajyostava in America) ಉದ್ದೇಶಿಸಿ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದರು. ಅಮೆರಿಕದಲ್ಲಿರುವ ಕನ್ನಡಿಗರು ಮತ್ತು ಭಾರತೀಯರು ಅಲ್ಲಿ ಪ್ರಬಲ ರಾಜಕೀಯ ಶಕ್ತಿ ಹೊಂದಿರುವ ಯಹೂದಿಗಳಿಗಿಂತ ಹೆಚ್ಚು ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಮೆರಿಕದಲ್ಲಿರುವ ಕನ್ನಡಿಗರು ರಾಜ್ಯ ಸರ್ಕಾರ ಮತ್ತು ಆ ದೇಶಗಳ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ. ಈಗ ಅಮೆರಿಕದ ಕಂಪನಿಗಳಿಗೆ ಬೆಂಗಳೂರಿನಿಂದ ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಕರ್ನಾಟಕ ಸರ್ಕಾರವು ಸಿಲಿಕಾನ್ ವ್ಯಾಲಿ ಬ್ರಿಡ್ಜ್ ಎನ್ನುವ ಹೊಸ ಉಪಕ್ರಮವನ್ನು ಆರಂಭಿಸಿದೆ ಎಂದರು.
ಕನ್ನಡಿಗರು ಕರ್ನಾಟಕಕ್ಕೆ ಸೀಮಿತವಾಗದೇ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ವೈದ್ಯಕೀಯ ರಂಗಗಳಲ್ಲಿ ಛಾಪು ಮೂಡಿಸಿರುವುದು ಅನುಕರಣೀಯ ನಡೆಯಾಗಿದೆ. ಈಗಿನ ವರ್ಚುವಲ್ ಮತ್ತು ಹೈಬ್ರಿಡ್ ಜಗತ್ತಿನಲ್ಲಿ ಅಮೆರಿಕದ ಕನ್ನಡಿಗರು ನಮಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದು ಸಚಿವರು ಬಣ್ಣಿಸಿದರು.