ಬೆಂಗಳೂರು: ಕನ್ನಡದ ಬಂಡಾಯ ಸಾಹಿತಿ ಎಂದೇ ಪ್ರಸಿದ್ಧರಾದ ಡಾ. ಸಿದ್ದಲಿಂಗಯ್ಯ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಲಾಗದೇ, ವಿಧಿವಶರಾಗಿದ್ದಾರೆ. ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ದಲಿತ ಕವಿ ಎಂದೇ ಪ್ರಸಿದ್ಧರಾಗಿದ್ದ ಸಿದ್ದಲಿಂಗಯ್ಯ ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ- ಬರವಣಿಗೆಗಳಲ್ಲೇ ತೊಡಗಿಕೊಂಡಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾಗಡಿಯ ಮಂಚಿನಬೆಲೆಯಲ್ಲಿ 1954ರಲ್ಲಿ ಜನಿಸಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ತಮ್ಮ ಸಾಹಿತ್ಯ, ಕವಿತೆಗಳ ಕೊಡುಗೆಗೆ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.