ಬೆಂಗಳೂರು:ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡದೇವಿ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.
ಕನ್ನಡ ಕಡ್ಡಾಯಕ್ಕೆ ನಮ್ಮವರೇ ಅಡ್ಡಾಗಲು:ಕನ್ನಡದ ನೆಲದಲ್ಲಿ ಕನ್ನಡವೇ ಮುಖ್ಯವಾಗಬೇಕು. ಕನ್ನಡ ಕಡ್ಡಾಯಕ್ಕೆ ನಮ್ಮವರೇ ಅಡ್ಡಾಗಲು ಹಾಕುತ್ತಿದ್ದಾರೆ ಎಂದು ರಿಜ್ವಾನ್ ಹರ್ಷದ್ ಹೇಳಿದರು. ಬೇರೆ ರಾಜ್ಯದಲ್ಲಿ ಭಾಷೆ ಕಡ್ಡಾಯ ಮಾಡಲು ನ್ಯಾಯಾಲಯದ ಮೊರೆ ಹೋಗ್ತಾರೆ. ಆದರೆ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡಲು ನಮ್ಮವರೇ ಅಡ್ಡಗಾಲು ಹಾಕಿರುವುದು ನಿಜಕ್ಕೂ ದುರಂತ ಎಂದರು.
ಹಿಂದಿ ಹೇರಿಕೆಯನ್ನ ನಾವು ಎಂದಿಗೂ ಸಹಿಸುವುದಿಲ್ಲ. ಭಾರತದಲ್ಲಿ ಕೇವಲ 34ರಷ್ಟು ಭಾಗದಲ್ಲಿ ಮಾತ್ರ ಹಿಂದಿ ಮಾತನಾಡುತ್ತಾರೆ ಅಷ್ಟೇ. ಶೇ.66 ರಷ್ಟು ಹಿಂದಿ ಮಾತನಾಡುವುದಿಲ್ಲ. ಆದರೆ ಎಲ್ಲೆಡೆ ಹಿಂದಿ ಹೇರಿಕೆಯಾಗುತ್ತಿದೆ. ತ್ರೀ ಭಾಷಾ ಕಲಿಕೆಗೆ ವಿರೋಧವಿಲ್ಲ, ಹಿಂದಿ ಒಂದು ಭಾಷೆಯಾಗಿ ಕಲೆಯಲು ವಿರೋಧವಿಲ್ಲ. ಆದ್ರೆ ಹಿಂದಿ ಹೇರಿಕೆ ಸಲ್ಲದು. ಕನ್ನಡದ ನೆಲದಲ್ಲಿ ಕನ್ನಡವೇ ಮುಖ್ಯವಾಗಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತಾನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್ ಹಿನ್ನೆಲೆ ರಾಜ್ಯೋತ್ಸವವನ್ನ ಸೀಮಿತವಾಗಿ ಆಚರಿಸಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ಜನೋತ್ಸವ ಆಗಲಿ. ಭಾಷೆ ಎಷ್ಟು ಶ್ರೀಮಂತವಾಗಿರುತ್ತದೆಯೋ ಅಷ್ಟೇ ಶ್ರೀಮಂತವಾಗಿ ಆ ನಾಡು ಇರುತ್ತದೆ. ಕನ್ನಡವನ್ನ ಎಲ್ಲ ಆಯಾಮಗಳಲ್ಲಿ ವಿಸ್ತರಣೆ ಮಾಡುವ ಅವಶ್ಯಕತೆ ಇದೆ. ಭಾರತ ದೇಶದಲ್ಲಿ ಅತ್ಯಂತ ಪುರಾತನವಾದ ಭಾಷೆಗಳಲ್ಲಿ ಕನ್ನಡ ಕೂಡ ಒಂದು. ಸಿಂಧೂ ನಾಗರಿಕತೆಗಿಂತ ಮೊದಲು ಕನ್ನಡ ಭಾಷೆ ಬಳಿಕೆಯಲ್ಲಿತ್ತು. ಇದಕ್ಕೆ ಇಲ್ಲಿ ಐತಿಹಾಸಿಕ ಗುರುತುಗಳಿವೆ. ಕನ್ನಡಕ್ಕೆ ತನ್ನದೇ ಅಂತರ್ಗತ ಶಕ್ತಿ ಇದೆ. ಸೂರ್ಯ ಚಂದ್ರ ಇರುವವರೆಗೂ ಈ ಶಕ್ತಿ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದರು.
ಈಗಲೂ ಮುಂಬೈ ಕರ್ನಾಟಕ ಎಂದರೆ ಹೇಗೆ?:ಗಡಿ ವಿವಾದ ಈಗಾಗಲೇ ಎಲ್ಲಾ ಬಗೆಹರಿದಿದೆ. ಆದರೂ ಅಲ್ಲಲ್ಲಿ ಕ್ಯಾತೆ ಶುರುವಾಗಿದೆ. ಈಗಲೂ ನಾವು ಮುಂಬೈ ಕರ್ನಾಟಕ ಎಂದರೆ ಹೇಗೆ?. ಹಾಗಾಗಿ ನಾನು ಮೊನ್ನೆ ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಿದ್ದೇನೆ. ಮುಂದಿನ ಸಂಪುಟ ಸಭೆಯಲ್ಲಿ ಕಿತ್ತೂರು ಕರ್ನಾಟಕಕ್ಕೆ ಅನುಮೋದನೆ ಸಿಗಲಿದೆ. ಬರೀ ಹೆಸರು ಬದಲಾವಣೆ ಮಾತ್ರವಲ್ಲ, ಆಡಳಿತ ಯಂತ್ರವನ್ನೂ ಬದಲಾವಣೆ ಮಾಡುತ್ತೇವೆ. ಮುಂದಿನ ಬಜೆಟ್ನಲ್ಲಿ ಕಿತ್ತೂರು ಕರ್ನಾಟಕಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತೇವೆ. ಮುಂದಿನ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ 3 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಲಿದ್ದೇವೆ ಎಂದು ಸಿಎಂ ಭರವಸೆ ನೀಡಿದರು.
ನೂತನ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ:ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪ್ರಸ್ತಾಪಿಸಿದ ಸಿಎಂ, ನೂತನ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಗುವುದು. ತಾಂತ್ರಿಕ ಶಿಕ್ಷಣವನ್ನೂ ಕನ್ನಡದಲ್ಲಿ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಕೋರ್ಟ್ನಲ್ಲಿ ಕರ್ನಾಟಕದ ಶಿಕ್ಷಣ ನೀತಿ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಸುಪ್ರೀಂಕೋರ್ಟ್ ವರೆಗೂ ಹೋಗಿ ಪ್ರಶ್ನೆ ಮಾಡಲಾಗಿದೆ. ನಾವು ತೆಗೆದುಕೊಂಡ ನಿರ್ಣಯವನ್ನು ಎಲ್ಲ ವೇದಿಕೆಗಳಲ್ಲಿಯೂ ಸಮರ್ಥಿಸಿಕೊಳ್ಳಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.