ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದ ಬೆಂಗಳೂರು ವಲಯದ ಕಚೇರಿಯಲ್ಲಿರುವ ನಾಮಫಲಕಗಳು, ಸೂಚನಾಫಲಕಗಳು ಆಂಗ್ಲಭಾಷೆಯಲ್ಲಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಕನ್ನಡ ಅನುಷ್ಠಾನದಲ್ಲಿ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಪ್ರಾಧಿಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಅನುಷ್ಠಾನದ ವಿಚಾರದಲ್ಲಿ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರಾಧಿಕಾರಕ್ಕೆ ಹಲವು ಬಾರಿ ದೂರುಗಳು ಬಂದಿವೆ. ಪ್ರಾಧಿಕಾರ ಬರೆದ ಪತ್ರಗಳಿಗೆ ಬ್ಯಾಂಕ್ ಆಫ್ ಬರೋಡದಿಂದ ನೀಡುತ್ತಿರುವ ಉತ್ತರ ಸಮಂಜಸವಾಗಿರದ ಕಾರಣ ಇಂದು ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಗ್ರಾಮೀಣ ಭಾಗದಲ್ಲಿರುವ ಬ್ಯಾಂಕ್ ಆಫ್ ಬರೋಡದ ವಿವಿಧ ಶಾಖೆಗಳಲ್ಲಿ ಚಲನ್, ಚೆಕ್‌ಗಳು ಆಂಗ್ಲ ಭಾಷೆಯಲ್ಲಿರುವುದರಿಂದ ಗ್ರಾಹಕರಿಗೆ ಅನಾನುಕೂಲವಾಗುತ್ತಿದೆ. ನಾಮಫಲಕ ಮತ್ತು ಸೂಚನಾ ಫಲಕಗಳು ಆಂಗ್ಲ ಭಾಷೆಯಲ್ಲಿರುವ ಬಗ್ಗೆ ಪ್ರಾಧಿಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ಗುರುತಿಸಿ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿರುವ ಬ್ಯಾಂಕ್ ಆಫ್ ಬರೋಡಾದ ಕಚೇರಿಗಳ ವೆಬ್‌ಸೈಟ್‌ನಲ್ಲಿ ಕನ್ನಡ ಭಾಷೆಯ ಆಯ್ಕೆಯೇ ಇಲ್ಲ ಎಂದು ಟಿ.ಎಸ್. ನಾಗಾಭರಣ ಅಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ಆಫ್ ಬರೋಡಾದ ಬೆಂಗಳೂರು ವಲಯ ಕಚೇರಿಯ ಮಹಾಪ್ರಬಂಧಕ ಸುಧಾಕರ್ ನಾಯಕ್ ಮಾತನಾಡಿ, ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಆಫ್ ಬರೋಡಾದ 2 ವಲಯ ಕಚೇರಿಗಳಿವೆ. ಬೆಂಗಳೂರು ವಲಯ ಕಚೇರಿ ಹಾಗೂ ಮಂಗಳೂರು ವಲಯ ಕಚೇರಿಗಳಿವೆ. ಬೆಂಗಳೂರು ವಲಯಕ್ಕೆ ಸಂಬಂಧಿಸಿದಂತೆ 9 ಜಿಲ್ಲೆಗಳಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಶಾಖೆಗಳು ನಮ್ಮ ಅಧೀನದಲ್ಲಿರುತ್ತದೆ. ಉಳಿದ ಜಿಲ್ಲೆಗಳಿರುವ ಶಾಖೆಗಳು ಮಂಗಳೂರು ವಲಯದ ಕಚೇರಿಯ ಅಧೀನದಲ್ಲಿರುತ್ತವೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ವಲಯದ ಕಚೇರಿಯ ವ್ಯಾಪ್ತಿಗೆ ಬರುವ ಬ್ಯಾಂಕ್ ಆಫ್ ಬರೋಡಾದ ಎಲ್ಲ ಶಾಖೆಗಳಲ್ಲೂ ಇನ್ನು 2-3 ದಿನಗಳಲ್ಲಿ ಸೂಚನಾ ಫಲಕ ಮತ್ತು ನಾಮಫಲಕಗಳು ಕನ್ನಡದಲ್ಲಿರುವಂತೆ ಕ್ರಮ ವಹಿಸಲಾಗುವುದು. ಕನ್ನಡದಲ್ಲಿರುವ ಚಲನ್ ಮತ್ತು ಚೆಕ್‌ಗಳು ಬ್ಯಾಂಕಿನಲ್ಲಿರುವಂತೆ ಎಲ್ಲ ಶಾಖೆಗಳ ಅಧಿಕಾರಿಗಳಿಗೆ ಪತ್ರ ಬರೆದು ಸೂಚಿಸಲಾಗುವುದು. ಇನ್ನು 2 ತಿಂಗಳಲ್ಲಿ ವೆಬ್‌ಸೈಟ್‌ನಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಐಬಿಪಿಎಸ್ ಪರೀಕ್ಷೆಯ ನಂತರ ರಾಜ್ಯಕ್ಕೆ ಸಂಬಂಧಿಸಿದಂತೆ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ಕರ್ನಾಟಕ ವೃತ್ತದ ಹುದ್ದೆಗಳಿಗೆ ಕರ್ನಾಟಕದವರನ್ನೇ ಆಯ್ಕೆ ಮಾಡುವಂತೆ ಬ್ಯಾಂಕ್ ಆಫ್ ಬರೋಡಾದ ಪ್ರಧಾನ ಕಚೇರಿಗೆ ಪತ್ರ ಬರೆದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅದರ ಪ್ರತಿಯನ್ನು ಕಳುಹಿಸಬೇಕು. ನಂತರ ಈ ಬಗ್ಗೆ ಪ್ರಾಧಿಕಾರ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ಕನ್ನಡಪರ ಚಿಂತಕ ರಾ.ನಂ. ಚಂದ್ರಶೇಖರ್, ಯುಕೋ ಬ್ಯಾಂಕ್ನ ಕಾರ್ಮಿಕ ನಾಯಕ ತಿಮ್ಮೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಹಾಗೂ ಬ್ಯಾಂಕ್ ಆಫ್ ಬರೋಡಾ ಬೆಂಗಳೂರು ವಲಯದ ಕಚೇರಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.