ಬೆಂಗಳೂರು: ಕೊರೊನಾ ವೈರಸ್ ಎರಡನೇ ಅಲೆ ಆರಂಭವಾಗಿದ್ದು, ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲು ಈಗಾಗಲೇ ಸರ್ಕಾರ ನಿರ್ಧಾರ ಮಾಡಿದ್ದು, ಈ ಹಿನ್ನೆಲೆ ಪ್ರತಿ ವರ್ಷದಂತೆ ಎಂ.ಜಿ ರೋಡ್, ಇಂದಿರಾ ನಗರ, ಕೋರಮಂಗಲ ಸೇರಿದಂತೆ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗೆ ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು.
ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್: ಕಮಲ್ ಪಂತ್
ಈಗಾಗಲೇ ಕೋವಿಡ್-19 ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಬಾರ್, ಪಬ್, ರೆಸ್ಟೋರೆಂಟ್ಗಳಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯ ನಿಯಮದ ಪ್ರಕಾರ ಬಾರ್, ರೆಸ್ಟೋರೆಂಟ್ಗಳು ಕಾರ್ಯ ನಿರ್ವಹಿಸಬೇಕು. ಜೊತೆಗೆ ಮಧ್ಯರಾತ್ರಿ ರಸ್ತೆಗಳಲ್ಲಿ ಹೊಸ ವರ್ಷ ಆಚರಣೆ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಹೊಸ ವರ್ಷಾಚರಣೆ ಸಂಭ್ರಮಕ್ಕೆ ಮಾದಕ ವಸ್ತು ಶೇಖರಣೆಯಾಗುತ್ತಿದೆ ಅನ್ನೋ ಮಾಹಿತಿ ಸಿಕ್ಕಿದ್ದು, ಈಗಾಗಲೇ ಸಿಸಿಬಿ ಕೂಡ ಕಾರ್ಯಾಚರಣೆ ನಡೆಸಲು ಮುಂದಾಗಿದೆ. ಸದ್ಯಕ್ಕೆ ಹೊಸ ವರ್ಷದ ಪಾರ್ಟಿಗಳಿಗೆ ತರಿಸಲಾಗಿದ್ದ 1ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಪೊಲೀಸರು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಕಮಲ್ ಪಂತ್ ತಿಳಿಸಿದರು.