ಬೆಂಗಳೂರು:ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಮ್ಮ ಆದ್ಯತೆ ಎಂದು ಪ್ರತಿ ಸರ್ಕಾರಗಳು ಭಾಷಣ ಮಾಡುತ್ತಲೇ ಇರುತ್ತವೆ. ಆದರೆ, ಅದು ಕೇವಲ ರಾಜಕೀಯ ಭಾಷಣವಾಗುತ್ತದೆಯೇ ಹೊರತು ವಾಸ್ತವದಲ್ಲಿ ಕಾರ್ಯಗತವಾಗಿರುವುದಿಲ್ಲ. ಅನುದಾನ ಬಳಕೆ, ವೆಚ್ಚವನ್ನು ನೋಡಿದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಏನಾಗಿದೆ ಎಂಬುದು ಗೊತ್ತಾಗುತ್ತದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ಪರಮೋಚ್ಛ ಆದ್ಯತೆ ಎಂಬುದು ಎಲ್ಲಾ ಪಕ್ಷಗಳು, ಸರ್ಕಾರಗಳ ಜಪ. ನಂಜುಡಪ್ಪ ವರದಿ ಪ್ರಕಾರ ಇಲಾಖೆಗಳಿಗೆ ಅನುದಾನ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ಅನುದಾನ ಹಂಚಿಕೆ ಮಾಡಲಾಗುತ್ತದೆ. ಆದರೆ ಅನುದಾನ ಬಿಡುಗಡೆ ಹಾಗೂ ಮಾಡುವ ವೆಚ್ಚ ಮಾತ್ರ ಕಡಿಮೆ ಇರುತ್ತದೆ. ಈ ಬಾರಿ ಸಿಎಂ ಬೊಮ್ಮಾಯಿ ಅವರು 3,000 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಿದ್ದಾರೆ.
ಖರ್ಚಾಗದೇ ಉಳಿದ ಅನುದಾನ:2020-22 ಸಾಲಿನಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅಭಿವೃದ್ಧಿ ಯೋಜನೆಯಡಿ ವೆಚ್ಚವಾಗದೇ ಅನುದಾನ ಹಾಗೇ ಉಳಿದಿದೆ. ಒಂದು ಕಡೆ ನಿಗದಿಯಾದಷ್ಟು ಅನುದಾನ ಬಿಡುಗಡೆಯಾಗಿಲ್ಲ, ಇನ್ನೊಂದೆಡೆ ಬಿಡುಗಡೆಯಾದ ಹಣವನ್ನೂ ಸಂಪೂರ್ಣವಾಗಿ ಖರ್ಚು ಮಾಡದೇ ಹಾಗೇ ಉಳಿಸಿಕೊಳ್ಳಲಾಗಿದೆ. ಬಹುತೇಕ ಮಾರ್ಚ್ ಅಂತ್ಯದ ವರೆಗೆ 3,210 ಕೋಟಿ ರೂ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಿಗೆ ನಿಗದಿಯಾಗಿತ್ತು. ಆದರೆ, ಆ ಪೈಕಿ ಅನುದಾನ ಬಿಡುಗಡೆಯಾಗಿರುವುದು 2,166 ಕೋಟಿ ರೂ. ಈ ಪೈಕಿ ಖರ್ಚಾಗಿರುವುದು 1,341 ಕೋಟಿ ರೂ. ಮಾತ್ರ. ಅಂದರೆ ಸುಮಾರು 825 ಕೋಟಿ ರೂ. ಖರ್ಚಾಗದೇ ಹಾಗೇ ಉಳಿದುಕೊಂಡಿದೆ. ಇನ್ನು ನಿಗದಿಯಾದ ಅನುದಾನಕ್ಕೆ ಹೋಲಿಕೆ ಮಾಡಿದರೆ ಸುಮಾರು 1,869 ಕೋಟಿ ರೂ. ಹಣ ಖರ್ಚಾಗದೇ ಹಾಗೇ ಉಳಿದುಕೊಂಡಿದೆ.