ಬೆಂಗಳೂರು: ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ ನೀಡುವ 1500 ಕೋಟಿ ರೂ. ಜೊತೆಗೆ 3 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡಬೇಕು ಎಂಬ ತಮ್ಮ ನೇತೃತ್ವದ ಶಾಸಕರ ನಿಯೋಗದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಳೆದ ಮಂಗಳವಾರ ಬೆಂಗಳೂರಿನಲ್ಲಿ ಸಭೆ ಸೇರಿದ್ದ ತಮ್ಮ ಭಾಗದ 10ಕ್ಕೂ ಹೆಚ್ಚು ಶಾಸಕರು, ಮುಖ್ಯಮಂತ್ರಿಗಳ ಬಳಿಗೆ ತೆರಳಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಬೇಕು. ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಬೇಕು. 371 ಜೆ ರೀತ್ಯ ನೇಮಕಾತಿಗಳು ನಡೆಯಬೇಕು ಎಂದು ಒತ್ತಾಯಿಸಲು ತೀರ್ಮಾನಿಸಿದ್ದಂತೆ ಇಂದು ತಮ್ಮ ನೇತೃತ್ವದಲ್ಲಿ 12 ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು ಎಂದು ಅವರು ತಿಳಿಸಿದರು.
ಕಳೆದ 3 ವರ್ಷಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶ ಸರ್ಕಾರದ ತೀವ್ರ ಕಡೆಗಣನೆಗೆ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಬೀದರ್ನಿಂದ ಬೆಂಗಳೂರುವರೆಗೆ ಕ್ರಾಂತಿ ಯಾತ್ರೆ ಮಾಡುವ ನಿರ್ಧಾರವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಕಳೆದ ಬಜೆಟ್ನಲ್ಲಿ 1500 ಕೋಟಿ ರೂಪಾಯಿ ನೀಡಲಾಗಿದ್ದರೂ, ಆ ಹಣದಲ್ಲಿ ಬಹುಪಾಲು(ಶೇ.80) ಖರ್ಚು ಮಾಡಿಲ್ಲ. ಈ ಭಾಗದ ಹಲವು ನೀರಾವರಿ ಯೋಜನೆಗಳು ಬಜೆಟ್ನಲ್ಲಿ ಪ್ರಸ್ತಾಪವಾಗಿ, ತಾಂತ್ರಿಕ ಅನುಮೋದನೆ ಪಡೆದಿದ್ದರೂ, ಆಡಳಿತಾತ್ಮಕ ಅನುಮೋದನೆ ನೀಡಲಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಲು ಸಭೆ ತೀರ್ಮಾನಿಸಿತ್ತು. ಅದರಂತೆ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ, ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಆಲಿಸಿದ ಮುಖ್ಯಮಂತ್ರಿಗಳು ನಾವು ನೀಡಿರುವ ಮನವಿಯಲ್ಲಿನ ಅಂಶಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು.