ಬೆಂಗಳೂರು :ಕೋವಿಡ್ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯದೆ ಮಕ್ಕಳ ಕಲಿಕೆಯಲ್ಲಿ ಕಲಿಕಾ ಹಿನ್ನಡೆ ಉಂಟಾಗಿತ್ತು. ಇದನ್ನ ಸರಿದೂಗಿಸಲು ಶಿಕ್ಷಣ ಇಲಾಖೆ ರೂಪಿಸಿರುವ 'ಕಲಿಕಾ ಚೇತರಿಕೆ' ಕಾರ್ಯಕ್ರಮವನ್ನು ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಬೆಂಗಳೂರಿನ ಜಯನಗರದಲ್ಲಿರುವ ಆರ್.ವಿ. ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉದ್ಘಾಟಿಸಿದರು. ಇದೇ ವೇಳೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಕೈಪಿಡಿಗಳನ್ನು ಬಿಡುಗಡೆ ಮಾಡಿದರು.
ಬಳಿಕ ಮಾತಾನಡಿದ ಸಚಿವ ನಾಗೇಶ್, ಕೋವಿಡ್ ಬಂದಾಗ ಆರಂಭದಲ್ಲಿ ಕೇವಲ ಆರೋಗ್ಯ ಇಲಾಖೆಗೆ ಇರುವ ಚಾಲೆಂಜ್ ಅಂತಾ ಅಂದುಕೊಂಡಿದ್ದೆವು. ಲಾಕ್ಡೌನ್ ಮಾಡಿದಾಗ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿತ್ತು. ಬಳಿಕ ತುಂಬಾ ಪರಿಣಾಮ ಬೀರಿದ್ದು ನಮ್ಮ ಶಿಕ್ಷಣ ಇಲಾಖೆಗೆ ಅಂತಾ ಅರಿವು ಆಯ್ತು.
ಶಾಲೆಗೆ ಬರದ ಮಕ್ಕಳಿಗೆ ಹೊಡೆತ ಕೊಟ್ಟಿದೆ ಅಂದುಕೊಂಡಿದ್ದೆವು. ಆದರೆ, ಈಗ ಎಲ್ಲಾ ರೀತಿಯ ಮಕ್ಕಳಿಗೂ ಈ ಸಾಂಕ್ರಾಮಿಕ ರೋಗ ದುಷ್ಪರಿಣಾಮ ಬೀರಿದೆ ಎಂಬ ಅರಿವು ಮೂಡಿದೆ. ಒಂದೂವರೆ ವರ್ಷ ಶಾಲೆಗೆ ಹೋಗದೇ ಮಕ್ಕಳ ಶಿಕ್ಷಣಕ್ಕೆ ಅಲ್ಲದೇ ಮಾನಸಿಕವಾಗಿಯೂ ತೊಂದರೆ ಕೊಟ್ಟಿದ್ದು ಗೊತ್ತೇ ಇದೆ. ಹೀಗಾಗಿ, ಕಲಿಕಾ ಚೇತರಿಕೆ ಎಂಬ ಕಾರ್ಯಕ್ರಮದ ಅಡಿ ಮಕ್ಕಳು ಮರೆತಿರುವುದನ್ನ ಕಲಿಸುವ ಪ್ರಯತ್ನ ಮಾಡಲಾಗುತ್ತಿದೆ ಅಂದರು.