ಬೆಂಗಳೂರು: ಒಬ್ಬ ವ್ಯಕ್ತಿ ಈಶ್ವರಪ್ಪ ಕಮಿಷನ್ ಕೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ನಿರಾಧಾರ ಆರೋಪಕ್ಕೆ ಹಿಂದೆ ಸಿಎಂ ಆಗಿದ್ದವರು ಸಹ ಧರಣಿ ಕುಳಿತಿದ್ದಾರೆ. ಇದನ್ನು ನೋಡಿ ಇಡೀ ದೇಶ ನಗುತ್ತಿದೆ. ಇಂತಹ ನೀಚ ರಾಜಕೀಯ ಯಾರೂ ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ರಾಜೀನಾಮೆ ಬಳಿಕ ತಮ್ಮ ಸರ್ಕಾರಿ ನಿವಾಸದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ನಾನು ಕೇಳಲು ಬಯಸುತ್ತೇನೆ, ನಿಮ್ಮ ಕಾಲದಲ್ಲಿ ಕಾರ್ಯಾದೇಶ ಇಲ್ಲದೆ ಸಾವಿರಾರು ಕೋಟಿ ರೂಪಾಯಿಯ ಕಾಮಗಾರಿಗೆ ಅನುಮೋದನೆ ನೀಡಿದ್ದಾರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಜೀವನ ಪ್ರತಿಪಕ್ಷ ಸ್ಥಾನದಲ್ಲಿದ್ದು ಧರಣಿ ಮಾಡುತ್ತಲೇ ಇರಲಿ. ಇಡೀ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ?. ಕೇವಲ ಕರ್ನಾಟಕದಲ್ಲಿ ಸ್ವಲ್ಪ ಜೀವ ಹಿಡಿದುಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಅಧಿಕೃತ ಪ್ರತಿಪಕ್ಷವೂ ಆಗುವುದಿಲ್ಲ. ಅವರಿಗೆ ಯಾವುದೇ ವಿಷಯವೇ ಇಲ್ಲ. ಗುತ್ತಿಗೆದಾರರ ಸಂಘದ ಕನಕಪುರದ ವ್ಯಕ್ತಿಯೊಬ್ಬ ಆರು ತಿಂಗಳಿಂದ ಮಂತ್ರಿಯವರು 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಏಕೆ ಹೇಳುತ್ತಿಲ್ಲ. ಅವರು ಕಾಂಗ್ರೆಸ್ ಏಜೆಂಟ್ ಆಗಿದ್ದಾರೆ. 'ಪ್ರಕರಣದಲ್ಲಿ ಶೇ. ಒಂದರಷ್ಟು ತಪ್ಪಿದ್ದರೆ ನನಗೆ ಶಿಕ್ಷೆ ಕೊಡು. ಇಲ್ಲವಾದರೆ ನನ್ನನ್ನು ದೋಷಮುಕ್ತಗೊಳಿಸು' ಎಂದು ನನ್ನ ಮನೆ ದೇವರು ಚೌಡೇಶ್ವರಿ ಬಳಿ ಪ್ರಾರ್ಥನೆ ಮಾಡಿದ್ದೇನೆ. ಸಂತೋಷ್ ಪಾಟೀಲ್ ಕೊಲೆಯೋ ಅಥವಾ ಸಹಜ ಸಾವೋ ಎಂಬುದನ್ನು ತನಿಖೆ ಮಾಡಲು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.