ಬೆಂಗಳೂರು:ಕೇಂದ್ರ ಚುನಾವಣಾ ಆಯೋಗ ಇಂದು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ್ದು, ಈ ತಿಂಗಳ 19ರಂದು ಚುನಾವಣೆ ನಡೆಯಲಿದೆ.
ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಜೂ. 19ರಂದು ಚುನಾವಣೆ - Central Election Commission
ಕೇಂದ್ರ ಚುನಾವಣಾ ಆಯೋಗ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದೆ. ಈ ತಿಂಗಳ 19ರಂದು ಚುನಾವಣೆ ನಡೆಯಲಿದ್ದು, ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
ರಾಜ್ಯಸಭೆ ಸದಸ್ಯರಾದ ಬಿಜೆಪಿಯ ಪ್ರಭಾಕರ ಕೋರೆ, ಜೆಡಿಎಸ್ನ ಕುಪೇಂದ್ರ ರೆಡ್ಡಿ, ಕಾಂಗ್ರೆಸ್ನ ರಾಜೀವ್ ಗೌಡ ಮತ್ತು ಬಿ.ಕೆ.ಹರಿಪ್ರಸಾದ್ ಅವರ ಅವಧಿ ಈ ತಿಂಗಳ 25ರಂದು ಮುಗಿಯಲಿದ್ದು, ಇವರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಘೋಷಿಸಿದೆ. ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜೂನ್ 9 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಜೂನ್ 10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ. 12 ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.
ಅಗತ್ಯ ಬಿದ್ದರೆ ಚುನಾವಣೆಯಂದೇ ಮತ ಎಣಿಕೆ ಸಹ ನಡೆಯಲಿದ್ದು, ಕರ್ನಾಟಕದ ಜತೆಗೆ ಅರುಣಾಚಲ ಪ್ರದೇಶ ಮತ್ತು ಮಿಜೋರಾಂನ ಎರಡು ರಾಜ್ಯಸಭಾ ಸ್ಥಾನಗಳಿಗೆ ಸಹ ಇದೇ ವೇಳಾಪಟ್ಟಿಯಂತೆ ಚುನಾವಣೆ ನಡೆಯಲಿದೆ.