ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗ ಎಲ್ಲರನ್ನು ಹೈರಾಣಾಗಿಸಿದೆ. ಮೂರನೇ ಅಲೆಗೆ ಜನರನ್ನು ಸಿದ್ಧಗೊಳಿಸಬೇಕು ಹಾಗೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಜೆ.ಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಲಾಯಿತು.
ಕೋವಿಡ್ ನಿವಾರಣೆಗೆ ಪ್ರಮುಖವಾಗಿ ಬಳಕೆ ಆಗುವ ಮಾಸ್ಕ್, ಪ್ಯಾರಾಸಿಟಮಲ್, ವಿಟಮಿನ್-ಸಿ, ಆಲ್ಕಾಫ್, ಬಿ ಕಾಂಫ್ಲೆಕ್ಸ್ ಮಾತ್ರೆಗಳನ್ನೇ ಬಳಸಿಕೊಂಡು ಶ್ರೀ ಸತ್ಯ ಸಾಯಿ ಗಣಪತಿಗೆ ಅಲಂಕಾರ ಮಾಡಲಾಗಿತ್ತು. ಸಾಮಾನ್ಯವಾಗಿ ದೇವಸ್ಥಾನದಲ್ಲಿ ದೇವರಿಗೆ ಹಾಗೂ ದೇಗುಲವನ್ನ ಫಲ ಪುಷ್ಪಗಳಿಂದ ಅಲಂಕರಿಸಲಾಗುತ್ತೆ. ಆದ್ರೆ ಅಲಂಕಾರಕ್ಕೆ ಬಳಸಿದ ಸಾಮಗ್ರಿಗಳನ್ನು ಮತ್ತೊಮ್ಮೆ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಪಾರ ವೆಚ್ಚದಲ್ಲಿ ಮಾಡುವ ಅಲಂಕಾರ ಜನರಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ಕೋವಿಡ್ ವಿರುದ್ಧ ಹೋರಾಟದಲ್ಲಿ ಪ್ರಮುಖವಾಗಿ ಬಳಸಲಾಗುವ ವಸ್ತುಗಳನ್ನ ಬಳಸಿ ದೇವಸ್ಥಾನವನ್ನ ಅಲಂಕರಿಸಲಾಗಿದೆ. ಇನ್ನು ಜುಲೈ 24 ರಿಂದ ಒಂದು ವಾರದ ತನಕ ಈ ಅಲಂಕಾರ ಇರಲಿದ್ದು, ನಂತರ ಈ ಸಾಮಾಗ್ರಿಗಳನ್ನ ಬಡಜನರಿಗೆ ಉಚಿತವಾಗಿ ಹಂಚಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.