ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸುವವರು ನೈಜ ಪತ್ರಕರ್ತರು ಆಗಿರಬೇಕು. ಹಾಗೆಯೇ, ಸಂಘಕ್ಕೆ ಕರ್ನಾಟಕ ಟ್ರೇಡ್ ಯೂನಿಯನ್ ಮಾದರಿ ನಿಯಮಗಳು–1953ರ ಪ್ರಕಾರವೇ ನಡೆಸಬೇಕು ಎಂದು ಕಾರ್ಮಿಕ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ.
ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಟ್ರೇಡ್ ಯೂನಿಯನ್ ಮಾದರಿಯಲ್ಲಿ ಚುನಾವಣೆ ನಡೆಸಿ: ಹೈಕೋರ್ಟ್ - ಟ್ರೇಡ್ ಯೂನಿಯನ್ ಮಾದರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕರ್ನಾಟಕ ಟ್ರೇಡ್ ಯೂನಿಯನ್ ಮಾದರಿ ಚುನಾವಣೆ ನಡೆಸಿ ಎಂದು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ರಾಯಚೂರಿನ 'ಈಶಾನ್ಯ ಟೈಮ್ಸ್' ಸಂಪಾದಕ ಎನ್. ನಾಗರಾಜ, ಶಿವಮೊಗ್ಗದ 'ಕ್ರಾಂತಿದೀಪ' ದಿನಪತ್ರಿಕೆ ಸಂಪಾದಕ ಎನ್.ಮಂಜುನಾಥ ಮತ್ತು ರಾಯಚೂರಿನ 'ಸುದ್ದಿ ಮೂಲ' ದಿನಪತ್ರಿಕೆ ಮುಖ್ಯ ವರದಿಗಾರ ಬಿ.ವೆಂಕಟಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಒಂದು ವೇಳೆ ಆದೇಶವನ್ನು ಪಾಲಿಸದಿದ್ದರೆ ಅಥವಾ ಯಾವುದೇ ತಕರಾರು ಉದ್ಭವಿಸಿದರೆ ಅರ್ಜಿದಾರರು ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಅರ್ಜಿದಾರರ ಆರೋಪ:
ಪತ್ರಕರ್ತರ ಸಂಘಕ್ಕೆ ಸರಿಯಾದ ಚುನಾವಣೆ ನಡೆಸಿಲ್ಲ. ಟ್ರೇಡ್ ಯೂನಿಯನ್ ಕಾಯ್ದೆ ಪ್ರಕಾರ ಸಂಘದಲ್ಲಿ 2 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದರೆ ಆಯುಕ್ತರೇ ಚುನಾವಣೆ ನಡೆಸಬೇಕು. ಎಲ್ಲ ಸದಸ್ಯರಿಗೂ ಪೂರ್ವಭಾವಿ ನೋಟಿಸ್ ಕಳುಹಿಸಬೇಕು. ಆದರೆ, ಈ ಸಂಘದಲ್ಲಿ ತಮ್ಮವರಲ್ಲೇ ಒಬ್ಬರನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸಿಕೊಂಡು ಚುನಾವಣೆ ನಡೆಸಲಾಗಿದೆ. ಯಾವುದೇ ಸದಸ್ಯರಿಗೆ ನೋಟಿಸ್ ಕಳುಹಿಸಿಲ್ಲ. ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆಯೂ ಸಮಪರ್ಕವಾಗಿ ನಡೆದಿಲ್ಲ. ಸಂಘದಲ್ಲಿ 7,800 ಸದಸ್ಯರಿದ್ದು, ನೈಜ ಪತ್ರಕರ್ತರ ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಆರೋಪಿಸಿದ್ದ ಅರ್ಜಿದಾರರು, 2018–2021ರ ಸಾಲಿಗೆ ಮರುಚುನಾವಣೆಗೆ ಆದೇಶಿಸಲು ನಿರ್ದೇಶಿಸಬೇಕು ಎಂದು ಕೋರಿದ್ದರು.