ಬೆಂಗಳೂರು: ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮಾಲೀಕನಿಗೆ ತಿಳಿಯದಂತೆ ಕೆಜಿಗಟ್ಟಲೇ ಚಿನ್ನ ಕದ್ದು ತಲೆಮರೆಸಿಕೊಂಡಿರುವ ಘಟನೆ ನಗರದಲ್ಲಿ ಜರುಗಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ.ಜಿ. ರಸ್ತೆಯಲ್ಲಿರುವ ನವರತ್ನ ಜ್ಯುವೆಲರಿ ಶಾಪ್ನಲ್ಲಿ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ಲಂಬೋದರ ಎಂಬಾತನ ವಿರುದ್ಧ ಶಾಪ್ ಮ್ಯಾನೇಜರ್ ಲಕ್ಷ್ಮಿನಾರಾಯಣ್ ದೂರು ನೀಡಿದ್ದಾರೆ.
ಪ್ರಕರಣ ಹಿನ್ನೆಲೆ
ಏಳೆಂಟು ವರ್ಷಗಳಿಂದ ಜ್ಯುವೆಲ್ಲರಿ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಲಂಬೋದರ, ಗ್ರಾಹಕರು ನೀಡುವ ಚಿನ್ನವನ್ನು ರಿಪೇರಿ ಮಾಡಿಸಿಕೊಂಡು ಶಾಪ್ಗೆ ತಂದುಕೊಡುವ ಕಾರ್ಯ ಮಾಡುತ್ತಿದ್ದ. ಜುಲೈ 23 ರಂದು ಗ್ರಾಹಕರೋರ್ವರು ರಿಪೇರಿಗಾಗಿ ನೀಡಿದ್ದ ಚಿನ್ನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಅನುಮಾನ ಬರುವಂತೆ ಲಂಬೋದರ್ ಉತ್ತರ ನೀಡಿದ್ದಾನೆ.
ಇದರಿಂದ ಸಂದೇಹಗೊಂಡ ಶಾಪ್ ಮ್ಯಾನೇಜರ್, ಜುಲೈ 7 ರಿಂದ ಆರೋಪಿ ಲಂಬೋದರ್ಗೆ ನೀಡಿದ ಚಿನ್ನದ ಬಗ್ಗೆ ಪರಿಶೀಲಿಸಿದಾಗ ಸುಮಾರು 2 ಕೆ.ಜಿ. 400 ಗ್ರಾಂನಷ್ಟು ಚಿನ್ನಾಭರಣ ಕಾಣೆಯಾಗಿರುವುದು ಗೊತ್ತಾಗಿದೆ. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ.