ದೇವನಹಳ್ಳಿ: ವಿಜಯಪುರ ಪುರಸಭೆಗೆ ಕಳೆದ 8 ವರ್ಷಗಳ ನಂತರ ಚುನಾವಣೆ ನಡೆದು ಜೆಡಿಎಸ್ ಸ್ಪಷ್ಟ ಬಹುಮತ ಪಡೆದುಕೊಂಡಿತ್ತು. ಆದರೆ, ಚುನಾವಣೆ ಫಲಿತಾಂಶ ಬಂದು ಐದು ತಿಂಗಳಾದರೂ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಆಗಿರಲಿಲ್ಲ. ಇನ್ನು ಕಾಂಗ್ರೆಸ್, ಜೆಡಿಎಸ್ಗೆ ಗಾಳ ಹಾಕಿ ಆಪರೇಷನ್ ಹಸ್ತ ಮಾಡಲು ಮುಂದಾಗಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ನಿನ್ನೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಹಲವು ಆಮಿಷಗಳ ನಡುವೆ ಜೆಡಿಎಸ್ ಪುರಸಭೆ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ:
ದೇವನಹಳ್ಳಿ ತಾಲೂಕಿನ ವಿಜಯಪುರ ಪುರಸಭೆಗೆ ನ್ಯಾಯಾಲಯದ ಅಡೆತಡೆಗಳಿಂದ ಎಂಟು ವರ್ಷಗಳ ನಂತರ ಚುನಾವಣೆ ನಡೆದಿತ್ತು. ಈ ಪುರಸಭೆ ಎಲೆಕ್ಷನ್ 23 ವಾರ್ಡ್ಗಳ ಪೈಕಿ ಜೆಡಿಎಸ್ 13, ಕಾಂಗ್ರೆಸ್, ಬಿಜೆಪಿ1, ಪಕ್ಷೇತರರು 2 ಸ್ಥಾನ ಗೆದ್ದಿದ್ದರು. ಜೆಡಿಎಸ್ ಅತಿ ಹೆಚ್ಚು ಸ್ಥಾನ ಪಡೆದು ಬಹುಮತ ಗಳಿಸಿತ್ತು. ಆದರೆ, ಚುನಾವಣೆ ಫಲಿತಾಂಶ ಬಂದು 5 ತಿಂಗಳ ನಂತರ ನಿನ್ನೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದೆ.
ವಿಜಯಪುರ ಪುರಸಭೆ ಅಧಿಕಾರ ಹಿಡಿದ ಜೆಡಿಎಸ್ ಜೆಡಿಎಸ್ಗೆ ಸ್ಪಷ್ಟ 13 ಸ್ಥಾನದ ಬಹುಮತವಿದ್ದರೂ 7 ಸ್ಥಾನ ಗೆದ್ದ ಕಾಂಗ್ರೆಸ್, ಜೆಡಿಎಸ್ನ ಕೆಲ ಸದಸ್ಯರಿಗೆ ಗಾಳ ಹಾಕಿತ್ತು. ಜತೆಗೆ ಪಕ್ಷೇತರರಿಗೆ ಆಮಿಷ ಒಡ್ಡಿ ಏನಾದರೂ ಮಾಡಿ ಪುರಸಭೆಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುಲು ಪ್ರಯತ್ನ ನಡೆಸಿತ್ತು ಎನ್ನುವ ಮಾತಿದೆ. ಹೀಗಾಗಿ ನಿನ್ನೆ ನಿಗದಿಯಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಮುನ್ನ, ಅಂದರೆ, ಮೂರು ದಿನಗಳ ಮೊದಲು ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ನ ಎಲ್ಲ ಸದಸ್ಯರನ್ನ ನಂದಿ ಬೆಟ್ಟದ ಕಡೆಯ ರೆಸಾರ್ಟ್ಗೆ ಶಿಫ್ಟ್ ಮಾಡಿದ್ದರು.
ಇದನ್ನೂ ಓದಿ:ಅನುದಾನಿತ ಪಿಯು ಕಾಲೇಜಿನಲ್ಲಿ ತೆರವಾದ ಹುದ್ದೆ ಭರ್ತಿ ಸಂಬಂಧ MLCಗಳ ಜತೆ ಚರ್ಚೆ: ನಾಗೇಶ್
ನಿನ್ನೆ ಚುನಾವಣೆ ನಡೆಯುವ ಹೊತ್ತಿಗೆ ಜೆಡಿಎಸ್ ಸದಸ್ಯರ ಜೊತೆಗೆ ಬಸ್ನಲ್ಲಿ ಆಗಮಿಸಿದ ಶಾಸಕರು ಎಲ್ಲರನ್ನೂ ಸುರಕ್ಷಿತವಾಗಿ ಕರೆತಂದು ಅಧ್ಯಕ್ಷರನ್ನಾಗಿ ರಾಜೇಶ್ವರಿ ಭಾಸ್ಕರ್ ಹಾಗೂ ಉಪಾಧ್ಯಕ್ಷರನ್ನಾಗಿ ಕೇಶವಪ್ಪ ಅವರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು. ಜೆಡಿಎಸ್ ಹಲವು ವರ್ಷಗಳ ನಂತರ ಪುರಸಭೆ ಗದ್ದುಗೆ ಏರುತ್ತಿದ್ದಂತೆ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.