ಬೆಂಗಳೂರು: ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಜೂನ್ 28 ರಂದು ಪ್ರತಿಭಟನೆ ನಡೆಸಲು ಜೆಡಿಎಸ್ ನಿರ್ಧರಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ದಿನದಿಂದ ದಿನಕ್ಕೆ ತೈಲ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನೆಲೆ ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಬೆಳಗ್ಗೆ 11 ಗಂಟೆಗೆ ಜೆಪಿ ಭವನದಿಂದ ಮೌರ್ಯ ಸರ್ಕಲ್ನಲ್ಲಿರುವ ಗಾಂಧಿ ಪ್ರತಿಮೆವರೆಗೂ ರ‍್ಯಾಲಿ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತೇವೆ ಎಂದು ತಿಳಿಸಿದರು.