ಬೆಂಗಳೂರು :ರಾಜ್ಯದಲ್ಲಿ ಕೋವಿಡ್ನಿಂದಾಗಿ ಇಷ್ಟು ದಿನ ತಟಸ್ಥವಾಗಿದ್ದ ಜೆಡಿಎಸ್ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ನೀಡಿದ ಹೇಳಿಕೆ ಇದಕ್ಕೆ ಪುಷ್ಟಿ ನೀಡುವಂತಿದೆ.
ಕೋವಿಡ್ ಎರಡನೇ ಅಲೆಯಲ್ಲಿ ಸರ್ಕಾರ ಮಾಡಿದ ಹಲವು ಎಡವಟ್ಟುಗಳಿಂದ ಸಾಮಾನ್ಯ ಜನರು ಹೈರಾಣಾಗಿದ್ದು, ಬಿಜೆಪಿ ಸರ್ಕಾರದಲ್ಲಿ ನಾಯಕತ್ವದ ಪ್ರಶ್ನೆ, ಶಾಸಕರ ಅಸಮಾಧಾನದಿಂದ ಮೂಡಿರುವ ಒಡಕು. ಇನ್ನೊಂದೆಡೆ ಕಾಂಗ್ರೆಸ್ ನಲ್ಲಿ ನಾಯಕರ ಭಿನ್ನಾಭಿಪ್ರಾಯಗಳು ಹಾಗೂ ಸಿಎಂ ಕುರ್ಚಿ ಗೆ ಎದ್ದಿರುವ ಕೂಗು. ಇವೆಲ್ಲವೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಮುಂದಿನ ದಿನಗಳಲ್ಲಿ ಪ್ಲಸ್ ಪಾಯಿಂಟ್ ಆಗುತ್ತವೆ ಎಂಬುದು ಜೆಡಿಎಸ್ ಲೆಕ್ಕಾಚಾರ.
ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಏಟಿಗೆ ಎದುರೇಟು ನೀಡುತ್ತಾ ಬಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಲೆಕ್ಕಾಚಾರವೇ ಬೇರೆಯದೇ ಆಗಿದೆ. "ಈಗ ನಮ್ಮ ಆಟ ಪ್ರಾರಂಭಿಸುತ್ತೇವೆ. ಇನ್ನು ಮುಂದೆ ನಮ್ಮ ಆಟ ಹೇಗಿರುತ್ತದೆ ಎಂಬುದನ್ನು ನೋಡಲಿ " ಎಂದು ಸವಾಲು ಎಸೆದಿರುವ ಕುಮಾರಸ್ವಾಮಿ ಅವರ ಒಳಾರ್ಥ ಕುತೂಹಲ ಮೂಡಿಸಿದೆ.
ಲಾಕ್ಡೌನ್ ಆದಾಗಿನಿಂದ ಬಿಡದಿ ಬಳಿಯಿರುವ ತಮ್ಮ ತೋಟದಲ್ಲಿ ಹೆಚ್ಚು ಸಮಯ ಇರುವ ಅವರು, ರೈತರು, ಬಡವರ ಸಮಸ್ಯೆಗಳನ್ನು ಮತ್ತಷ್ಟು ತಿಳಿದುಕೊಂಡಿದ್ದಾರೆ. ಹಾಗಾಗಿಯೇ ರೈತರು ಬದುಕಲು ಹೇಗೆ ಸಾಧ್ಯ? ಎಂಬುದನ್ನು ನನ್ನ ತೋಟದಲ್ಲಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದರು. ಜುಲೈ 15ರಿಂದ ನನ್ನ ಕಾರ್ಯಕ್ರಮ ಏನು? ಅನ್ನೋದನ್ನ ತಿಳಿಸುತ್ತೇನೆ ಎಂದಿದ್ದಾರೆ.
ಸದ್ದಿಲ್ಲದೆ ಪಕ್ಷ ಸಂಘಟನೆ : ಕೋವಿಡ್ ನಡುವೆಯೂ ಪಕ್ಷ ಸಂಘಟನೆ ಮಾಡುವ ಬಗ್ಗೆ ನಿರ್ಧರಿಸಿರುವ ಹೆಚ್ಡಿಕೆ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಳಿ ಹಲವು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ನಿರ್ಧರಿಸಿರುವ ಅವರು, ಈಗಾಗಲೇ ಪಕ್ಷದ ಹಲವು ಘಟಕಗಳನ್ನು ವಿಸರ್ಜನೆ ಮಾಡಿದ್ದಾರೆ. ಆ ಘಟಕಗಳಿಗೆ ಹೊಸದಾಗಿ ನೇಮಕ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.