ಬೆಂಗಳೂರು: ಜೆಡಿಎಸ್ಗೆ 2023ರ ವಿಧಾನಸಭೆ ಚುನಾವಣೆಯೇ ಮುಖ್ಯ ಗುರಿ. ರಾಜ್ಯದಲ್ಲಿ ತೃತೀಯ ಶಕ್ತಿಯಾಗಿ ಹೊರಹೊಮ್ಮಲು ಪಕ್ಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ 123 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂದು ತೆನೆ ಪಾರ್ಟಿ ಪಣತೊಟ್ಟಿದೆ.
ಈ ವರ್ಷದ ಆರಂಭದಲ್ಲಿ ನಡೆದಿದ್ದ ಪಶ್ಚಿಮ ಬಂಗಾಳ ರಾಜ್ಯದ ಚುನಾವಣೆಯಲ್ಲಿ 294 ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಎ (ಸುಲಭವಾಗಿ ಗೆಲುವು ಸಾಧಿಸಬಹುದಾದ ಕ್ಷೇತ್ರ), ಬಿ (ಸ್ಪರ್ಧಿಸುವ ಕ್ಷೇತ್ರ) ಮತ್ತು ಸಿ (ಕಠಿಣ ಸ್ಪರ್ಧೆಯ ಕ್ಷೇತ್ರ) ಎಂದು ವಿಂಗಡಿಸಿತ್ತು. ರಾಜ್ಯದಲ್ಲಿ ಜೆಡಿಎಸ್ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಎ+ ವಿಭಾಗವನ್ನು ಸೇರಿಸಿದೆ. ಈ ಮೂಲಕ ಅತ್ಯಂತ ಪ್ರಾಬಲ್ಯ ಹೊಂದಿರುವ ಮತ್ತು ಅತ್ಯುತ್ತಮ ಅಭ್ಯರ್ಥಿಗಳನ್ನು ಹೊಂದಿರುವ ಜೆಡಿಎಸ್ ಕ್ಷೇತ್ರಗಳೆಂದು ಪರಿಗಣಿಸಲಾಗುತ್ತದೆ.
ಮಿಷನ್ 272 ಘೋಷವಾಕ್ಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದರು. ಅದೇ ಪರಿಕಲ್ಪನೆಯಲ್ಲಿ ಮಿಷನ್ 123 ಘೋಷವಾಕ್ಯದೊಂದಿಗೆ 2023ರ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಜೆಡಿಎಸ್ ತಂತ್ರ ರೂಪಿಸುತ್ತಿದೆ. ಜೆಡಿಎಸ್ ಎಲ್ಲಾ 224 ಕ್ಷೇತ್ರಗಳ ಮೇಲೆ ಗಮನಹರಿಸುವುದಿಲ್ಲ. ಗೆಲುವಿಗೆ ಸಾಧ್ಯತೆಯಿರುವ ಕ್ಷೇತ್ರಗಳ ಮೇಲೆ ಗಮನಹರಿಸಲಿದೆ. 20-25 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲು ವರಿಷ್ಠರು ತೀರ್ಮಾನಿಸಿದ್ದಾರೆ.
ರಾಜ್ಯದಲ್ಲಿರುವ ಕಾರ್ಯಕರ್ತರಿಗೆ, ಮುಖಂಡರಿಗೆ ಚೈತನ್ಯ ತುಂಬುವುದು ಸೇರಿದಂತೆ ಪಕ್ಷವನ್ನು ಬಲಿಷ್ಠಗೊಳಿಸಲು ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಪಕ್ಷವನ್ನು ಮೇಲೆತ್ತಲು ಅಗತ್ಯ ಇರುವ ಎಲ್ಲ ಕ್ರಮಗಳ ಜೊತೆಗೆ, 'ತಮ್ಮ ಪರಿಕಲ್ಪನೆಯಲ್ಲಿ' ಪಕ್ಷಕ್ಕೆ ಪುನಶ್ಚೇತನ ನೀಡಲು ಕಾರ್ಯತಂತ್ರವನ್ನು ಹೆಚ್ಡಿಕೆ ರೂಪಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ ಯಾವಾಗ?