ಬೆಂಗಳೂರು: ಕಾಂಗ್ರೆಸ್ ತೊರೆದಿರುವ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಅವರು ಏಪ್ರಿಲ್ 17ರಂದು ಜೆಡಿಎಸ್ಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದು, ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕೊಡಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಈ ಬಗ್ಗೆ ಘೋಷಣೆ ಮಾಡಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಇಬ್ರಾಹಿಂ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿದ್ದಾರೆ. ಸದ್ಯ ರಾಜ್ಯಾಧ್ಯಕ್ಷರಾಗಿರುವ ಹೆಚ್.ಕೆ.ಕುಮಾರಸ್ವಾಮಿ ಸಂಸದೀಯ ಮಂಡಳಿಯ ಅಧ್ಯಕ್ಷರಾಗಲಿದ್ದಾರೆ. ಇಬ್ಬರಿಗೂ ಸಮಾನ ಹುದ್ದೆ ನೀಡಲಾಗುತ್ತಿದೆ. ಇಬ್ಬರೂ ಜೊತೆಯಾಗಿಯೇ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ತೊರೆದ ನಂತರ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಇಬ್ರಾಹಿಂ, ಜೆಡಿಎಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ಈಗಾಗಲೇ ಭಾಗವಹಿಸುತ್ತಿದ್ದಾರೆ. ಜೆಪಿ ಭವನದಲ್ಲಿ ಏಪ್ರಿಲ್ 17ರಂದು ಪಕ್ಷ ಸೇರ್ಪಡೆಯಾಗುವ ಇಬ್ರಾಹಿಂ, ಅದೇ ದಿನ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ.