ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಪೂರಕವಾಗಿ ಪಕ್ಷ ಸಂಘಟಿಸಲು ಮತ್ತು ಚುನಾವಣಾ ಸಿದ್ಧತೆಗಳನ್ನು ಜೆಡಿಎಸ್ ಮಾಡಿಕೊಳ್ಳುತ್ತಿದೆ. ನಿಗದಿತ ಸಮಯಕ್ಕೆ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆ ಕೋವಿಡ್‌ನಿಂದಾಗಿ ಮುಂದೂಡಲಾಗಿದ್ದು, ಚುನಾವಣೆ ದಿನಾಂಕ ಇನ್ನು ಪ್ರಕಟವಾಗಿಲ್ಲ. ಆದರೂ, ಜೆಡಿಎಸ್ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ.
ಬೆಂಗಳೂರಿನಲ್ಲಿ ಪಕ್ಷ ಸಂಘಟಿಸುವುದರ ಜೊತೆಗೆ ಚುನಾವಣಾ ಸಿದ್ಧತೆ ನಡೆಸಲು ಜೆಡಿಎಸ್ ಮುಖಂಡ, ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಸಮಿತಿ ರಚಿಸಿದೆ. ಈ ಸಮಿತಿ ಸಂಚಾಲಕರಾಗಿ ಜೆಡಿಎಸ್ನ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್. ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಕೆ.ವಿ. ನಾರಾಯಣಸ್ವಾಮಿ, ಎಚ್.ಎಂ. ರಮೇಶ್ ಗೌಡ, ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ, ಪಕ್ಷದ ರಾಜ್ಯ ‘ಕೋರ್’ ಸಮಿತಿ ಸದಸ್ಯ ವಿ. ನಾರಾಯಣಸ್ವಾಮಿ, ಪಕ್ಷದ ಬೆಂಗಳೂರು ಮಹಾನಗರ ಮಹಿಳಾ ಘಟಕದ ಅಧ್ಯಕ್ಷೆ ರುತ್ ಮನೋರಮಾ ಮತ್ತು ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್ ಪಾಷ ಸದಸ್ಯರಾಗಿದ್ದಾರೆ.
ಅದೇ ರೀತಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಛಿಸಿರುವ ಮಹಿಳಾ ಸ್ಪರ್ಧಾಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸುವುದು. ನಮ್ಮ ಪಕ್ಷದ ಮಹಿಳಾ ಭಾಗವಹಿಸುವಿಕೆ ಮತ್ತು ನಾಯಕತ್ವವನ್ನು ವಾರ್ಡ್ ಮತ್ತು ಕ್ಷೇತ್ರ ಮಟ್ಟ ದಲ್ಲಿ ಬಲವರ್ಧನೆ ಗೊಳಿಸಲು ಬೆಂಗಳೂರು ಮಹಾನಗರ ಮಹಿಳಾ ಘಟಕದ ಅಧ್ಯಕ್ಷೆ ರುತ್ ಮನೋರಮಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.ಸದ್ಯದಲ್ಲಿಯೇ ಬರಲಿರುವ ಬಿಬಿಎಂಪಿ ಚುನಾವಣೆಯ ದೃಷ್ಟಿಯಿಂದ ಈ ಸಮಿತಿ ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ಮಹಿಳಾ ಘಟಕದ ಸಭೆ ನಾಳೆ ರೂತ್ ಮನೋರಮಾ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆಯಲಿದೆ.