ಬೆಂಗಳೂರು:ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ್ ಅವರು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಘೋಷಣೆಗೆ ಸಂಬಂಧಿಸಿದಂತೆ ಸದನದ ಗಮನ ಸೆಳೆದರು.
ವಿಧಾನಸೌಧದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಬಗ್ಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳ ಹಿಂದೆ ನಾನು ಜನಸ್ಪಂದನಾ ಕಾರ್ಯಕ್ರಮದ ನಿಮಿತ್ತವಾಗಿ ನನ್ನ ಕ್ಷೇತ್ರ ವ್ಯಾಪ್ತಿಯ ಮೀನಕೇರಾ ಗ್ರಾಮಕ್ಕೆ ಭೇಟಿ ನೀಡಿದ್ದೆ. ಆ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಬೋರ್ಡ್ ಹಾಕಲಾಗಿತ್ತು. ವಾಸ್ತವವಾಗಿ ನೋಡಿದಾಗ ಆ ಗ್ರಾಮದಲ್ಲಿ ಕೇವಲ 30 ರಿಂದ 40 ಪ್ರತಿಶತದಷ್ಟು ಮಾತ್ರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಬೋರ್ಡ್ ಇದೆ, ಶೌಚಾಲಯಗಳಿಲ್ಲ:ಮೀನಕೇರಾ ಗ್ರಾಮದಲ್ಲಿನ ಶೌಚಾಲಯಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಗ್ರಾಮದಲ್ಲಿ 918 ಕುಟುಂಬಗಳ ಪೈಕಿ 858 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ ಎಂದು ಸರ್ಕಾರ ಉತ್ತರಿಸಿದೆ. ಆದರೆ, ವಾಸ್ತವವಾಗಿ ಅಲ್ಲಿ ಅಷ್ಟು ಪ್ರಮಾಣದ ಶೌಚಾಲಯಗಳಿಲ್ಲ. ಅಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಬೋರ್ಡ್ ಹಾಕಲಾಗುತ್ತದೆ. ಆದರೆ ಎಷ್ಟೋ ಕಡೆಗಳಲ್ಲಿ ಶೌಚಾಲಯಗಳಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.