ಕರ್ನಾಟಕ

karnataka

ETV Bharat / city

ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಪಟ್ಟು; ಆರಂಭದಲ್ಲೇ ಸದನದ ಬಾವಿಗಿಳಿದು ಜೆಡಿಎಸ್‌ ಧರಣಿ

ವಿಧಾನಸಭೆ ಅಧಿವೇಶನದಲ್ಲಿ ತಮ್ಮ ಹಲವು ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಕಲಾಪದ ಆರಂಭದಲ್ಲೇ ಜೆಡಿಎಸ್‌ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸ್ಪೀಕರ್‌ ಮೇಲೆ ಒತ್ತಡದ ತಂತ್ರ ಸರಿಯಲ್ಲ ಎಂದು ಸಭಾಧ್ಯಕ್ಷ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

jds members protest in assembly session
ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಪಟ್ಟು; ಸದನದ ಬಾವಿಗಿಳಿದ ಜೆಡಿಎಸ್‌ ಧರಣಿ

By

Published : Sep 20, 2021, 12:21 PM IST

ಬೆಂಗಳೂರು: ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರು ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಸದನದ ಬಾವಿಗಿಳಿದು ಧರಣಿ ಮಾಡಿದರು. ಜೆಡಿಎಸ್‌ ನವರು ಸದನಕ್ಕೆ ಬರಬೇಕಾ? ಬೇಡ್ವಾ? ಅಂತ ಸ್ವಲ್ಪ ಹೇಳ್ಬಿಡಿ. ನಿಮಯ 69ರ ಅಡಿಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಹೆಚ್‌ಡಿ ರೇವಣ್ಣ, ಬಂಡೆಪ್ಪ ಕಾಶೆಂಪೂರ್‌ ಸೇರಿದಂತೆ ಜೆಡಿಎಸ್‌ನ ಎಲ್ಲ ಸದಸ್ಯರು ಒಟ್ಟಾಗಿ ಕೂಗಿದರು.

ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಪಟ್ಟು; ಸದನದ ಬಾವಿಗಿಳಿದು ಜೆಡಿಎಸ್‌ ಧರಣಿ

ಇದಕ್ಕೆ ಉತ್ತರಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ನೀವು ಕೊಟ್ಟಿರುವ ನೋಟಿಸ್‌ಗಳು ನಮ್ಮ ಬಳಿ ಸಾಕಷ್ಟು ಇವೆ. ಇಲ್ಲ ಅಂತ ನಾನು ಹೇಳುತ್ತಿಲ್ಲ. ಬ್ಯುಸಿನೆಸ್‌ ಅಜೆಂಡಾದಲ್ಲಿ ಅದನ್ನು ಹಾಕಿಕೊಂಡಿದ್ದೇವೆ. ಯಾವುದನ್ನು ಬಿಡುವ ಉದ್ದೇಶ ಇಲ್ಲ. ಅಜೆಂಡದಲ್ಲಿ ನಿಮ್ಮದು ಬಂದಿಲ್ಲ ಎಂದರೆ ವೈಯಕ್ತಿಕವಾಗಿ ಬಂದು ಮಾತನಾಡಿ ಎಂದು ಹೇಳಿದರು.

ಇದಕ್ಕೆ ಮತ್ತೆ ಜೆಡಿಎಸ್‌ ಸದಸ್ಯ ಕಾಶೆಂಪೂರ್‌ ಇರೋದೇ 10 ದಿನ ಇನ್ನೂ ಅವಕಾಶ ನೀಡಿಲ್ಲ. ಕೇವಲ ಮೂರು ದಿನ ಕಲಾಪ ಬಾಕಿ ಇದೆ. ನಿಮಗೆ ವಿನಂತಿ ಮಾಡುತ್ತೇವೆ ಎಂದು ನಮಗೆ ಅವಕಾಶ ನೀಡಿ ಎಂದು ಹೇಳುತ್ತಿದ್ದಂತೆ ಹೆಚ್‌ ಡಿ ರೇವಣ್ಣ ಸೇರಿದಂತೆ ಜೆಡಿಎಸ್‌ನ ಎಲ್ಲಾ ಸದಸ್ಯರು ಸದನದ ಬಾವಿಗಿಳಿದು ಧರಣಿ ಮಾಡಿದರು.

ಈ ವೇಳೆ ಮಾತನಾಡಿದ ಸಭಾಧ್ಯಕ್ಷರು, ಸ್ಪೀಕರ್‌ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಡದ ತಂತ್ರ ಬಳಸಿ ನನ್ನ ಮೇಲೆ ನಿರ್ಣಯ ಮಾಡಿಸಲು ಆಗುವುದಿಲ್ಲ. ನಿಮಗೆ ರಾಜ್ಯದ ಜನರ ಹಿತದೃಷ್ಟಿಯಿಂದ ಯಾವುದಾದರೂ ವಿಷಯ ಚರ್ಚೆ ಮಾಡಬೇಕಾದರೆ ಅಜೆಂಡಾದಲ್ಲಿ ಆ ವಿಷಯ ಇಲ್ಲದಿದ್ದರೆ ನನ್ನ ಜೊತೆ ಮಾತನಾಡಿ. ಸದನದ ಸಮಯ ಹಾಳಾಗಲು ಅವಕಾಶ ನೀಡಬೇಡಿ. ರಾಜ್ಯದ ಜನ ಇದನ್ನು ನೋಡ್ತಾ ಇದ್ದಾರೆ. ನಿಮ್ಮದು ಸಾರ್ವಜನಿಕ ಮಹತ್ವದ ವಿಷಯ ಇದ್ದರೆ ನನ್ನ ಜೊತೆ ಮಾತನಾಡಿ ಎಂದರು.

ನಿಮಯ 69ರ ಅಡಿಯಲ್ಲಿ ನಿಮ್ಮದು ಒಂದು ವಿಷಯ ಇದೆ. ಇನ್ನೊಂದು ವಿಷಯ ತೆಗೆದುಕೊಳ್ಳಬೇಕಾದರೆ ನನ್ನ ಜೊತೆ ಮಾತನಾಡಿ, ಆಗ ಅವಕಾಶ ಮಾಡಿಕೊಡಿತ್ತೇನೆ. ದಯವಿಟ್ಟು ತಮ್ಮ ಸ್ಥಾನಗಳಿಗೆ ಹೋಗಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದರು. ಸ್ಪೀಕರ್‌ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ದಯವಿಟ್ಟು ನಿಮ್ಮ ಸ್ಥಾನಕ್ಕೆ ಹೋಗಿ ಎಂದು ಸಚಿವ ಆರ್‌. ಅಶೋಕ್‌ ಕೂಡ ಹೇಳಿದ್ರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ನಿಮಯ 69ರ ಅಡಿ , ಗಮನ ಸೆಳೆಯುವ ಸೂಚನೆ ಅಥವಾ ಹಕ್ಕುಚ್ಯುತಿ ಇರಬಹುದು. ಅದಕ್ಕೆ ಉತ್ತರ ನೀಡಲು ಸಿದ್ಧರಿದ್ದೇವೆ ಎಂದರು. ಸಮಯವನ್ನು ಯಾವಾಗ ನಿಗದಿ ಮಾಡಬೇಕು ಎಂಬುದಕ್ಕೆ ಸ್ಪೀಕರ್‌ಗೆ ಪರಮಾಧಿಕಾರ ಇದೆ. ಈ ವಿಷಯಕ್ಕೆ ಧರಣಿ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು. ಆಗ ಎಲ್ಲಾ ಜೆಡಿಎಸ್‌ ಸದಸ್ಯರು ತಮ್ಮ ಸ್ಥಾನಗಳಿಗೆ ವಾಪಸ್‌ ಆದರು.

ABOUT THE AUTHOR

...view details