ಬೆಂಗಳೂರು:ಕಳೆದ 75 ವರ್ಷಗಳಿಂದ ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಧ್ಯೇಯದೊಂದಿಗೆ ಜೆಡಿಎಸ್ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ 'ಜನತಾ ಜಲಧಾರೆ' ಗಂಗಾ ರಥಯಾತ್ರೆ ಏಪ್ರಿಲ್ 16 ರಿಂದ ಆರಂಭವಾಗಲಿದೆ. ರಾಜ್ಯದ 15 ಸ್ಥಳಗಳಲ್ಲಿ ಜಲಸಂಗ್ರಹವನ್ನು ಮಾಡಲಾಗುತ್ತದೆ. ಏಪ್ರಿಲ್ 16 ರಂದು ಹೊರಡುವ ರಥಯಾತ್ರೆಯಲ್ಲಿ ಜಲಸಂಗ್ರಹ ಮಾಡಲಿರುವ ಪಟ್ಟಿ ಈ ಕೆಳಕಂಡಂತೆ ಇದೆ.
ಕೆಆರ್ಎಸ್ನಲ್ಲಿ ಕಾವೇರಿ ನದಿಯಿಂದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಆಲಮಟ್ಟಿ ಜಲಾಶಯದ ಕೃಷ್ಣಾ ನದಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಲಕಾವೇರಿಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶ್ರೀರಾಮದೇವರ ಕಟ್ಟೆಯ ಹೇಮಾವತಿ ನದಿಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಎತ್ತಿನಹೊಳೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮೇಕೆದಾಟು ಮತ್ತು ಹಾರೋಬೆಲೆಯಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ್, ಕಣಕುಂಬಿಯ ಮಹದಾಯಿ ನದಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಂಜ್ರಾದಲ್ಲಿ ಮಾಜಿ ಸಚಿವ, ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಅವರು ಜಲ ಸಂಗ್ರಹ ಮಾಡಲಿದ್ದಾರೆ.
ನೀರಾವರಿ ಯೋಜನೆ ಬಗ್ಗೆ ಮಾಹಿತಿ:ಉಳಿದಂತೆ, ನಿಗದಿಪಡಿಸಲಾದ ಸ್ಥಳಗಳಲ್ಲಿ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಸಂಸದರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಆಕಾಂಕ್ಷಿಗಳು ಸೇರಿದಂತೆ ಪಕ್ಷದ ಮುಖಂಡರಿಗೆ ಜಲಸಂಗ್ರಹದ ಜವಾಬ್ದಾರಿಯನ್ನು ವಹಿಸಲಾಗಿದೆ. 15 ನದಿಗಳಿಂದ ಏಕಕಾಲದಲ್ಲಿ ಪವಿತ್ರ ಜಲವನ್ನು ಸಂಗ್ರಹ ಮಾಡಲಾಗುತ್ತದೆ. ನದಿನೀರಿನ ಸದ್ಬಳಕೆ, ನೀರಾವರಿ ಯೋಜನೆಗಳ ವೇಗ ಹೆಚ್ಚಿಸುವುದು, ಪ್ರತಿ ಜಿಲ್ಲೆಯಲ್ಲೂ ನೀರಿನ ಸಮಾನತೆ ಸೇರಿದಂತೆ ವಿವಿಧ ಆಶಯಗಳನ್ನು ಜನತಾ ಜಲಧಾರೆ ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.