ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ. ನಾನು ಯಾವುದೇ ಲೂಟಿ ಹೊಡೆಯುವ ಸಂಸ್ಥೆಗಳನ್ನು ನಡೆಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಭಾನುವಾರ ದಾಸರಹಳ್ಳಿಯ ಅಬ್ಬಿಗೆರೆ ಹಾಗೂ ಹೊಸಕೆರೆಹಳ್ಳಿಯಲ್ಲಿ ನಡೆದ ಜನತಾ ಮಿತ್ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೆಡಿಎಸ್ ಪಕ್ಷಕ್ಕೆ ಬೆಂಗಳೂರಿನಲ್ಲಿ ನೆಲೆಯೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಪಕ್ಷಕ್ಕೆ ನಗರದಲ್ಲಿ ನೆಲೆ ಇದೆಯೋ, ಇಲ್ಲವೋ ಎಂಬುದನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೋರಿಸುತ್ತೇನೆ. ಬಡವರನ್ನು ಹಿಂಸಿಸುವ ಕೆಲಸ ನಡೆದರೆ ಶ್ರೀಲಂಕಾದ ಪರಿಸ್ಥಿತಿ ಇಲ್ಲಿಯೂ ನಡೆಯುತ್ತದೆ. ಇನ್ನೊಂದು ಶ್ರೀಲಂಕಾ ಸೃಷ್ಟಿ ಮಾಡುವ ಪಕ್ಷಗಳು ನಿಮಗೆ ಬೇಕಾ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಂಬಿ ಅವರ ಮಾತಿಗೆ ನೀವು ಮರುಳಾಗಬೇಡಿ. ಮೋದಿ ಹಾಗೂ ಬಿಜೆಪಿ ಪಕ್ಷ ಇರುವುದೇ ಶ್ರೀಮಂತರಿಗಾಗಿ. ಅವರು ಚುನಾವಣೆ ಸಂದರ್ಭದಲ್ಲಿ ಹಣ ಕೊಟ್ಟು ಮತ ಪಡೆಯಲು ಬರುತ್ತಾರೆ. ನಿಮ್ಮ ದುಡ್ಡನ್ನು ಲೂಟಿ ಮಾಡಿ ಮಜಾ ಮಾಡುತ್ತಿದ್ದಾರೆ. ಅವರು ಶ್ರೀಮಂತರ ಪರವಾಗಿದ್ದಾರೆ, ಬಡವರ ಪರವಿಲ್ಲ. ಪಿಎಸ್‌ಐ ಹುದ್ದೆ ಪಡೆಯಲು ಲಕ್ಷಾಂತರ ರೂ. ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಜನರ ಹಣ ರಾಜ್ಯದಲ್ಲಿ ಲೂಟಿಯಾಗುತ್ತಿದೆ ಎಂದು ಆರೋಪಿಸಿದರು.
ಹೊಸಕೆರೆಹಳ್ಳಿ ಸುತ್ತಮುತ್ತ ಬಡಾವಣೆಗಳ ಸಮಸ್ಯೆ ಬಗೆಹರಿಸಲು ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಈ ಭಾಗದಲ್ಲಿ ಕಾವೇರಿ ನೀರಿನ ಯೋಜನೆಯನ್ನು ಕೊಟ್ಟಿದ್ದು ಹೆಚ್.ಡಿ.ದೇವೇಗೌಡರು. ಇವತ್ತು ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿದೆ. 40% ಕಮಿಷನ್ ಹೆಸರಲ್ಲಿ ಲೂಟಿ ನಡೆಯುತ್ತಿದೆ. ಬೆಂಗಳೂರು ಮೂಲಭೂತ ಸಮಸ್ಯೆಗಳ ಬಗ್ಗೆ ಹೈಕೋರ್ಟ್ ಪ್ರತಿನಿತ್ಯ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಬಿಜೆಪಿಗೆ ಸೇರುವ ವದಂತಿ: ಗೋವಾ ಪ್ರತಿಪಕ್ಷದ ನಾಯಕನ ವಜಾಗೊಳಿಸಿದ ಕಾಂಗ್ರೆಸ್