ಬೆಂಗಳೂರು: ಮುಂಬರುವ 2023ರ ವಿಧಾನಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ಸಂಜೆ ಜಾತ್ಯಾತೀತ ಜನತಾದಳ ಕಚೇರಿ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಹೆಚ್ಡಿಕೆ, ಮುಂದಿನ ಈ ಎರಡೂ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಹೆಬ್ಬಾಳದಲ್ಲಿ ಕಚೇರಿ ಪ್ರಾರಂಭ ಮಾಡಲಾಗಿದೆ. ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕ್ಷೇತ್ರದಲ್ಲಿ ಪಕ್ಷವು ಪ್ರಬಲವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಸರ್ಕಾರ ಹೇಗಿದೆ?ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆ ಒಂದು ಕಡೆ ಇರಲಿ. ನಾವು-ನೀವು ಯೋಚನೆ ಮಾಡುವುದು ಯಾವ ವಿಚಾರ ಎನ್ನುವುದು ಮುಖ್ಯವಾಗುತ್ತದೆ. ನಿತ್ಯದ ಜೀವನದಲ್ಲಿ ಯಾವ ರೀತಿ ನೋವು ಅನುಭವಿಸುತ್ತಿದ್ದೀರಾ? ನಿತ್ಯದ ನಿಮ್ಮ ಶ್ರಮಕ್ಕೆ ಯಾವ ಶಕ್ತಿಯನ್ನು ಸರ್ಕಾರ ತುಂಬುತ್ತಿದೆ? ನೀವು ಕಟ್ಟುವ ತೆರಿಗೆಗೆ ಸರ್ಕಾರ ನಡೆಸುವವರು ಶಕ್ತಿ ತುಂಬುತ್ತಿದ್ದಾರಾ ಎನ್ನುವುದು ಮುಖ್ಯ ಎಂದರು.
ಶಿಕ್ಷಣ ವ್ಯವಸ್ಥೆ ಹಾಳಾಗಿದೆ:ಕಳೆದ ಎರಡು ವರ್ಷದಿಂದ ಶಿಕ್ಷಣದಲ್ಲಿ ಏನಾಗಿದೆ? ಆನ್ಲೈನ್ ಶಿಕ್ಷಣ ಕೊಟ್ಟಿದ್ದೇವೆ ಅಂತಾರೆ. ಆದರೆ ಬಡವರಿಗೆ ಇದು ತಲುಪಿದೆಯಾ? ಕೋವಿಡ್, ಹಿಜಾಬ್ ಮತ್ತು ಕೇಸರಿ ಶಾಲು ಎಂದೆಲ್ಲ ಹೇಳಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರೆಂದು ಕಿಡಿಕಾರಿದರು.
ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ: ಶಾಲಾ ಕಾಲೇಜು ಪರಿಸ್ಥಿತಿ ಏನಾಗಿದೆ. ಸರ್ಕಾರಿ ಶಾಲೆಗೆ ರಾಜಕಾರಿಗಳ ಮಕ್ಕಳನ್ನು ಕಳಿಸುತ್ತಾರ? ಮುಸ್ಲಿಮರ ಸಂಪ್ರದಾಯವಾಗಿ ಡ್ರೆಸ್ ಕೋಡ್ ಇದೆ. ಇದು ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಶಾಲೆಗಳಿಗೆ ಮಕ್ಕಳು ಹೋಗಬೇಕಾದರೆ ಹಿಜಾಬ್ ಧರಿಸಿಕೊಂಡು ಹೋಗುತ್ತಾರೆ. ಇದನ್ನೇ ಪ್ರಮುಖವಾಗಿ ಇಟ್ಟುಕೊಂಡು ಉಡುಪಿಯಲ್ಲಿ ಒಂದು ಘಟನೆ ನಡೆಯಿತು. ಅಲ್ಲಿಂದ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿತು. ಎರಡು ಸಮಾಜದ ತಾಯಂದಿರು ಈ ಸಭೆಯಲ್ಲಿ ಇದ್ದೀರಿ. ಎರಡು ರಾಷ್ಟ್ರೀಯ ಪಕ್ಷಗಳು ನಿಮ್ಮ ಮುಗ್ಧ ಮನಸ್ಸುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ವಶೀಕರಣ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ವೋಟ್ ಬ್ಯಾಂಕ್ ರಾಜಕಾರಣ:ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಖಾಸಗಿ ಶಾಲೆಗಳಲ್ಲಿ ಇಂಥಹ ಗಲಾಟೆಗಳು ನಡೆದಿಲ್ಲ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿವೆ. ಸರ್ಕಾರಿ ಶಾಲೆಗೆ ಹೋಗುವುದು ಬಡವರ ಮಕ್ಕಳು. ಇಲ್ಲಿ ಈ ರೀತಿ ವಾತಾವರಣ ಸೃಷ್ಟಿ ಮಾಡಿ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.