ಬೆಂಗಳೂರು: ಮೈತ್ರಿ ಸರ್ಕಾರದ ಸಹವಾಸ ಬೇಡ ಬದಲಾಗಿ ಸ್ವತಂತ್ರ ಸರ್ಕಾರ ತರಲು ಸಂಕಲ್ಪ ಮಾಡೋಣ. 123 ಗುರಿ ಏನಿದೆ ಅದು ಮುಟ್ಟಲು ಇಂದೇ ಪಣ ತೊಡೋಣ. ಈ ಮೂಲಕ ಸರ್ವ ಜನಾಂಗದ ಶಾಂತಿಯ ತೋಟ ಶಾಶ್ವತವಾಗಿ ಬದುಕುವ ನಿಟ್ಟಿನಲ್ಲಿ ಈ ಸರ್ಕಾರ ಬರಲೇ ಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.
ನೆಲಮಂಗಲ ಸಮೀಪ ಇಂದು ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೂನ್, ಜುಲೈ ತಿಂಗಳಲ್ಲಿ ಮತ್ತೊಂದು ಸುತ್ತಿನ ರಥಯಾತ್ರೆ ನಡೆಸುತ್ತೇನೆ ಎಂದು ಘೋಷಿಸಿದರು. ಹಳ್ಳಿ, ಹಳ್ಳಿಗಳಲ್ಲಿ ರಥಯಾತ್ರೆ ನಡೆಸುತ್ತೇವೆ. ನಾನೇ ಜನರ ಮುಂದೆ ಬರುತ್ತೇನೆ. ನಮ್ಮ ಪಕ್ಷದಿಂದಲೇ ಬೆಳೆದು ಹೋದವರು ಜೆಡಿಎಸ್ ಮುಗಿದೇ ಹೋಯಿತು ಎಂದಿದ್ದರು. ಆದರೆ, ಜನತಾ ಜಲಧಾರೆ ಸಮಾವೇಶ ಅವರಿಗೆ ಉತ್ತರ ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
90 ವರ್ಷ ವಯಸ್ಸಿನಲ್ಲೂ ನಾಡಿನ ಜನರಿಗಾಗಿ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ. ರಾಜಕೀಯದ ಬೆಳವಣಿಗೆಗಳ ಪರಿಣಾಮವಾಗಿ ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದೆ. ಆದರೆ ಯಾವುದೇ ಕಾರ್ಯಕ್ರಮ ಕೊಡಲು ಸ್ವತಂತ್ರ ಅಧಿಕಾರ ಇರಲಿಲ್ಲ. ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ನೋವು ಅನುಭವಿದ್ದು ನನಗೆ ಮಾತ್ರ ಗೊತ್ತು ಎಂದರು.
ಕೊರೊನಾದಿಂದ ಜೆಡಿಎಸ್ ನಾಯಕರು ಹೊರ ಬಂದಿಲ್ಲ ಅಂತಾ ಇದ್ದರು. ಅದಕ್ಕೆ ಕಾರಣ ಕೊರೊನಾದಿಂದ ಆದಂತಹ ಸಾವಿರಾರು ಜನರ ಸಾವು. ನಿಮಗೆ ತೊಂದರೆ ಆಗಬಾರದು ಅಂತ ಕಾರ್ಯಕ್ರಮ ಹಾಕಿಕೊಂಡಿರಲಿಲ್ಲ. ಬಿಜೆಪಿ, ಕಾಂಗ್ರೆಸ್ ನಾಯಕರಷ್ಟು ಅವಸರ ನಮಗೆ ಇರಲಿಲ್ಲ. ಕಳೆದ ತಿಂಗಳಿಂದ ಜಲಧಾರೆ ಕಾರ್ಯಕ್ರಮ ಆರಂಭವಾಯ್ತು. ಅಂದಿನಿಂದ ಇಂದಿನವರೆಗೆ ನಮಗೆ ಸಾಥ್ ಕೊಟ್ಟಿದ್ದೀರಾ. ಮೈಸೂರಿನಲ್ಲಿ ಒಂದು ಸ್ಥಾನ ಬರಲ್ಲ ಎಂದು ಇಲ್ಲೇ ಬೆಳೆದು ಹೋದವರೇ ಹೇಳಿದರು. ಆದರೆ, ಇವತ್ತು ನೀವು ಜಲಧಾರೆ ಸಮಾವೇಶದ ಮೂಲಕ ತೋರಿಸಿದ್ದೀರಾ ಎಂದರು.