ಬೆಂಗಳೂರು :ವಿಧಾನಮಂಡಲ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ಜೆಡಿಎಸ್ 'ಜನತಾ ಜಲಧಾರೆ' ಗಂಗಾ ರಥಯಾತ್ರೆ ಆರಂಭ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ನಾಲ್ಕು ಜಿಲ್ಲೆಗಳ ಪೂರ್ವಭಾವಿ ಸಭೆ ನಡೆಸಿದರು.
ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇಂದು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಶಾಸಕರು, ಜಿಲ್ಲಾಧ್ಯಕ್ಷರು, ಅಭ್ಯರ್ಥಿಗಳು, ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಆಯಾ ಜಿಲ್ಲೆಯ ಪಕ್ಷದ ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ತಪ್ಪದೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಹಾಗೂ ಯುವಕರು, ಮಹಿಳೆಯರು, ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ಜನರು ಭಾಗಿಯಾಗುವಂತೆ ಪ್ರೇರಣೆ ನೀಡಬೇಕು ಎಂದು ಕುಮಾರಸ್ವಾಮಿ ಅವರು ಸೂಚಿಸಿದರು.
ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಈ ಜಿಲ್ಲೆಗಳಿಗೆ ಮಾಡಿರುವ ಜನಪರ, ರೈತಪರ ಕೆಲಸಗಳನ್ನು ಜನರಿಗೆ ತಿಳಿಸುವ ಕಾರ್ಯ ಈ ಯಾತ್ರೆಯಲ್ಲಿ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಡಿ.ನಾಗರಾಜಯ್ಯ, ಕೆ ಎಂ ಕೃಷ್ಣಾರೆಡ್ಡಿ, ಗೋವಿಂದರಾಜು. ಗೌರಿಶಂಕರ್, ಡಾ.ಶ್ರೀನಿವಾಸಮೂರ್ತಿ, ಕೆ ಎನ್ ತಿಪ್ಪೇಸ್ವಾಮಿ ಹಾಗೂ ಚೌಡರೆಡ್ಡಿ ತೂಪಲ್ಲಿ, ವಕ್ಕಲೇರಿ ರಾಮು, ಸಮೃದ್ಧಿ ಮಂಜುನಾಥ, ತಿಮ್ಮರಾಯಪ್ಪ, ಸುಧಾಕರ್ ಲಾಲ್, ಅಪ್ಪಯ್ಯಣ್ಣ, ಗುಬ್ಬಿ ನಾಗರಾಜ್, ನರಸಿಂಹಮೂರ್ತಿ, ಶ್ರೀನಾಥ ಉಪಸ್ಥಿತರಿದ್ದರು.
ಇಬ್ಬರು ಶಾಸಕರು ಗೈರು :ಗುಬ್ಬಿ ಶಾಸಕ ಶ್ರೀನಿವಾಸ್ ( ವಾಸು) ಹಾಗೂ ಕೋಲಾರದ ಶಾಸಕ ಶ್ರೀನಿವಾಸ್ ಗೌಡ ಸಭೆಗೆ ಹಾಜರಿರಲಿಲ್ಲ. ಇವರಿಬ್ಬರೂ ಸಹ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದು, ಅವರು ತೊರೆಯಲು ಮುಂದಾಗಿದ್ದಾರೆ. ಹಾಗಾಗಿ, ಇಂದಿನ ಸಭೆಗೆ ಬಂದಿಲ್ಲ ಎನ್ನಲಾಗಿದೆ.
ಇದನ್ನೂಓದಿ:ಸಿ.ಪಿ.ಯೋಗೇಶ್ವರ್ ವಿರುದ್ಧ ಜೆಡಿಎಸ್ ಮುಖಂಡರ ವಾಗ್ದಾಳಿ