ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ಪಕ್ಷ ಬಿಡಲು ತಯಾರಿ ನಡೆಸುತ್ತಿರುವ ಶಾಸಕರು ಹಾಗೂ ಮುಖಂಡರಿಗೆ 'ಪ್ರತ್ಯಾಸ್ತ್ರ' ಉಪಯೋಗಿಸಲು ಜೆಡಿಎಸ್ ಸಿದ್ದತೆ ಮಾಡಿಕೊಳ್ಳುತ್ತಿದೆ.
ಪಕ್ಷ ತೊರೆಯಲು ಕೆಲವು ಶಾಸಕರು ಹಾಗೂ ಮುಖಂಡರು ಸನ್ನದ್ಧರಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು, ಪ್ರತಿತಂತ್ರ ರೂಪಿಸುತ್ತಿದ್ದಾರೆ. ಪಕ್ಷ ಬಿಡುವ ಶಾಸಕರ ಕ್ಷೇತ್ರಗಳಿಗೆ ಪರ್ಯಾಯ ನಾಯಕರನ್ನು ಪರಿಚಯಿಸುವ ಅಭಿಯಾನವನ್ನು ಸದ್ಯದಲ್ಲೇ ದಳಪತಿಗಳು ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪರ್ಯಾಯ ನಾಯಕರ ಪರಿಚಯ:
ಇತ್ತೀಚೆಗೆ ಬಿಡದಿಯಲ್ಲಿರುವ ಹೆಚ್ಡಿಕೆ ತೋಟದ ಮನೆಯಲ್ಲಿ ನಡೆದ ಪಕ್ಷದ 'ಜನತಾ ಪರ್ವ' ಕಾರ್ಯಾಗಾರದಲ್ಲಿ ಕುಮಾರಸ್ವಾಮಿ ಈ ವಿಚಾರವನ್ನು ಹೇಳಿಕೊಂಡಿದ್ದರು. ಹಾಗಾಗಿ ಈ ಬಗ್ಗೆ ತಾಲೀಮು ನಡೆದಿದೆ ಎನ್ನಲಾಗಿದೆ.
ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಿರುವ ದಳಪತಿಗಳು, ಅವರನ್ನು ಹಂತ - ಹಂತವಾಗಿ ರ‍್ಯಾಲಿ ಮೂಲಕ ಪರಿಚಯಿಸುವ ಉದ್ದೇಶ ಹೊಂದಿದ್ದಾರೆ. ಇದರ ಬೆನ್ನಲ್ಲೇ ತುಮಕೂರಿನ ಗುಬ್ಬಿ ಕ್ಷೇತ್ರವನ್ನು ಗುರಿಯಾಗಿಸಿಕೊಂಡಿರುವ ಹೆಚ್ಡಿಕೆ, ಶಾಸಕ ಎಸ್ .ಆರ್. ಶ್ರೀನಿವಾಸ್ ಬದಲಿಗೆ ಮತ್ತೊಬ್ಬ ನಾಯಕನನ್ನು ತರಲು ಸಿದ್ಧತೆ ನಡೆಸುತ್ತಿದ್ದಾರೆ.
ಕುಟುಂಬ ರಾಜಕಾರಣದ ವಿರುದ್ಧ ದನಿ ಎತ್ತಿದ್ದ ಶ್ರೀನಿವಾಸ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಅಕ್ಟೋಬರ್ 25 ರಂದು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ತುಮಕೂರು ಜಿಲ್ಲಾ ಪಂಚಾಯತ್ ಸದಸ್ಯೆ ಗಾಯತ್ರಿ ದೇವಿ ಹಾಗೂ ಅವರ ಪತಿ ನಾಗರಾಜ್ ಏರ್ಪಡಿಸಿರುವ ರ‍್ಯಾಲಿಯಲ್ಲಿ ಕುಮಾರಸ್ವಾಮಿ ಅವರು ಭಾಗವಹಿಸುವ ನಿರೀಕ್ಷೆಯಿದೆ.
ಶಾಸಕ ಶ್ರೀನಿವಾಸ್ ಹೊರತುಪಡಿಸಿ ಎಲ್ಲ ಜಿಲ್ಲಾ ಮಟ್ಟದ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ, ನಾಗರಾಜ್ 2023 ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.