ಬೆಂಗಳೂರು : ರಾಜ್ಯದ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ಬೀಗದ ಪರಿಸ್ಥಿತಿ ಇಲ್ಲ. ಆದರೆ, ಯಾವುದೇ ಕ್ಷೇತ್ರದಲ್ಲೂ ಗೆಲ್ಲದ ಜೆಡಿಎಸ್ ಲೆಕ್ಕಾಚಾರವೇ ಬೇರೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಗಳಿಸಿದರೆ, ಕಾಂಗ್ರೆಸ್ ಪಕ್ಷ ಮಸ್ಕಿಯಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಜೆಡಿಎಸ್ ಸ್ಪರ್ಧಿಸಿದ್ದ ಬಸವಕಲ್ಯಾಣ ಕ್ಷೇತ್ರದಲ್ಲಿ ಸೋತಿದೆ.
ಸಹಜವಾಗಿ ಈ ಫಲಿತಾಂಶದಿಂದ ಬಿಜೆಪಿ ಪಾಳೆಯದಲ್ಲಿ ಹರ್ಷ ಮೂಡಬೇಕಿತ್ತು. ಜೆಡಿಎಸ್ನಲ್ಲಿ ಬೇಸರ ಕಾಣಬೇಕಿತ್ತು. ಆದರೆ, ಇದ್ಯಾವುದೂ ಆಗಲಿಲ್ಲ. ಹಿಂದೆ ಇಂತಹ ಪರಿಸ್ಥಿತಿಯಲ್ಲಿ ಉಪಚುನಾವಣೆಗಳು ಬಂದಾಗ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸಿತ್ತು. ಯಡಿಯೂರಪ್ಪ ಅವರ ನಾಯಕತ್ವ ಅಭಾಧಿತವಾಗುವಂತೆ ಮಾಡಿತ್ತು.
ಈ ಬಾರಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬಂದವು. ಆ ಸಮಯದಲ್ಲೇ ಉಪಚುನಾವಣೆಗಳು ಘೋಷಣೆಯಾದವು. ಇದು ಸಹಜವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸವಾಲಿನ ಪ್ರಶ್ನೆಯಾಗಿ ಪರಿಣಮಿಸಿತು. ಹಾಗಾಗಿ, ಯಡಿಯೂರಪ್ಪ ಅವರು ಈ ಬಾರಿ ಉಪಚುನಾವಣೆಗಳು ಘೋಷಣೆಯಾದ ಕೂಡಲೇ ದೊಡ್ಡ ಮಟ್ಟದ ತಯಾರಿ ಮಾಡಿಕೊಂಡರು.
ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸಲು ದಿವಂಗತ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ಕೊಟ್ಟರೆ ಹೆಚ್ಚು ಲಾಭ ಎಂದು ಯಡಿಯೂರಪ್ಪ ಲೆಕ್ಕಾಚಾರ ಹಾಕಿದರು.
ಅದೇ ರೀತಿ, ಕಾಂಗ್ರೆಸ್ನಿಂದ ಹೊರಬಂದು ತಾವು ಸರ್ಕಾರ ರಚಿಸಲು ಸಹಕಾರ ನೀಡಿದ ಪ್ರತಾಪ್ ಗೌಡ ಪಾಟೀಲ್ ಅವರನ್ನು ಗೆಲ್ಲಿಸಿಕೊಂಡು ಬರುವುದು ಖುದ್ದು ಯಡಿಯೂರಪ್ಪ ಅವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿತ್ತು.
ಉಳಿದಂತೆ ಮಲ್ಲಿಕಾರ್ಜುನ ಖೂಬಾ ಅವರಿಗೆ ಟಿಕೆಟ್ ತಪ್ಪಿಸಿ ಶರಣು ಸಲಗಾರ್ ಅವರಿಗೆ ಟಿಕೆಟ್ ನೀಡಬೇಕು ಎಂಬ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಸ್ವತಃ ಯಡಿಯೂರಪ್ಪ. ಹೀಗೆ ಎಲ್ಲ ದೃಷ್ಟಿಯಿಂದ ಯೋಚಿಸಿ ಅವರು ಟಿಕೆಟ್ ಹಂಚಿಕೆಗೆ ಸಹಕರಿಸಿದರಾದರೂ, ಉಪಚುನಾವಣೆಗಳಲ್ಲಿ ಹಿಂದಿನಂತೆ ಅವರ ಮಂತ್ರದಂಡ ಕೆಲಸ ಮಾಡಲಿಲ್ಲ ಎಂತಲೇ ಹೇಳಬಹುದು.
'ಮಂಗಳ' ವಿಚಾರದಲ್ಲಿ ಕೈ ಸವಾಲು
ಬೆಳಗಾವಿ ಲೋಕಸಭಾ ಕ್ಷೇತ್ರವನ್ನೇ ಗಮನಿಸಿದರೆ ಅಲ್ಲಿ ಸ್ಪರ್ಧಿಸಿದ್ದ ಮಂಗಳಾ ಅಂಗಡಿ ಅವರ ಗೆಲುವು ನಿರಾಯಾಸವಾಗಲಿದೆ. ಪತಿಯ ನಿಧನದಿಂದ ಸೃಷ್ಟಿಯಾದ ಅನುಕಂಪ ಅವರ ಭಾರೀ ಅಂತರದ ಗೆಲುವಿಗೆ ಕಾರಣವಾಗುತ್ತದೆ ಎಂಬ ಲೆಕ್ಕಾಚಾರ ಯಡಿಯೂರಪ್ಪ ಅವರಲ್ಲಿತ್ತು. ಆದರೆ, ಅದು ಉಲ್ಟಾ ಹೊಡೆಯಿತು. ಮಂಗಳಾ ಅಂಗಡಿ ಅವರ ಗೆಲುವು ನಿರಾಯಾಸವಾಗುವುದಿರಲಿ, ಮತ ಎಣಿಕೆ ನಡೆದ ಸಂಜೆಯ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಗೆಲ್ಲುವುದು ಬಹುತೇಕ ನಿಶ್ಚಿತ ಎಂಬ ಪರಿಸ್ಥಿತಿ ಕಾಣಿಸಿಕೊಂಡಿತ್ತು.
ಆದರೆ, ಮಂಗಳಾ ಅಂಗಡಿ ಗೆಲುವು ಸಾಧಿಸಿ ಸಮಾಧಾನದ ನಿಟ್ಟುಸಿರು ಬಿಡಲು ಅಂತಿಮ ಸುತ್ತುಗಳವರೆಗೆ ಕಾಯಬೇಕಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರಿಗೆ ಸುಮಾರು ನಾಲ್ಕು ಲಕ್ಷದಷ್ಟು ಲೀಡ್ ಕೊಟ್ಟ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮತಗಳಿಂದ ಮಂಗಳಾ ಅಂಗಡಿ ಗೆಲುವು ಸಾಧಿಸಿದರು.
ವಸ್ತುಸ್ಥಿತಿ ಎಂದರೆ ಇದು ಕ್ಷೇತ್ರದಲ್ಲಿ ಬಿಜೆಪಿ ವರ್ಚಸ್ಸು ಕುಸಿದ ಪರಿಣಾಮವೇ ಹೊರತು ಮತ್ತೇನಲ್ಲ. ಮರಾಠ ಮತಗಳು ದೊಡ್ಡ ಮಟ್ಟದಲ್ಲಿ ಬಿಜೆಪಿ ವಿರುದ್ದ ಚಲಾವಣೆಯಾಗುತ್ತದೆ ಎಂಬ ಸುಳಿವಿದ್ದರೂ ಬಿಜೆಪಿ ನಾಯಕರು ಅದನ್ನು ಸರಿದೂಗಿಸಿಕೊಳ್ಳಲು ಯಾವುದೇ ತಂತ್ರ ಬಳಸಲಿಲ್ಲ. ಲಿಂಗಾಯತ ಮತ ಬ್ಯಾಂಕಿನಲ್ಲೂ ಸಣ್ಣ ಪ್ರಮಾಣದ ಒಡಕು ಕಾಣಿಸಿಕೊಂಡಿತು. ಅದನ್ನು ಸರಿಪಡಿಸುವ ಕೆಲಸವಾಗಲಿಲ್ಲ.
ಜೆಡಿಎಸ್ ನಿರಾಸಕ್ತಿಯೇ ಬಿಜೆಪಿ ಗೆಲುವಿಗೆ ಕಾರಣ..?
ಈ ಮಧ್ಯೆ ಬಿಜೆಪಿಯ ಗೆಲುವಿಗೆ ನೆರವಾದ ಮತ್ತೊಂದು ಮುಖ್ಯ ಕಾರಣವೆಂದರೆ ಜೆಡಿಎಸ್ ತೋರಿದ ನಿರಾಸಕ್ತಿ. ಕ್ಷೇತ್ರದಲ್ಲಿ ತನಗಿರುವ ಶಕ್ತಿಯಿಂದ ಒಬ್ಬ ಬಲಿಷ್ಟ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಒಂದು ಲಕ್ಷಕ್ಕೂ ಹೆಚ್ಚು ಮತ ಪಡೆಯುವ ಶಕ್ತಿ ಜೆಡಿಎಸ್ಗಿತ್ತು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರೂ ಕ್ಷೇತ್ರದಿಂದ ಒಬ್ಬ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಆ ಮೂಲಕ ಜೆಡಿಎಸ್ ಇರುವಿಕೆಯನ್ನು ತೋರಿಸುವ ಬಯಕೆ ಹೊಂದಿದ್ದರು.
ಆದರೆ, ಅಂತಿಮ ಹಂತದಲ್ಲಿ ಅಂತಹ ನಿಲುವಿನಿಂದ ಪಕ್ಷ ಹೊರಗೆ ಬಂತು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬಂದಿವೆ. ಒಂದು ವೇಳೆ ಈ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಗಣನೀಯ ಮತಗಳನ್ನು ಸೆಳೆಯುವ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸಿದ್ದರೆ ಅದು ನಿಶ್ಚಿತವಾಗಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಸೋಲಿಗೆ ಕಾರಣವಾಗುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಮಸ್ಕಿಯಲ್ಲಿ ಬಿಜೆಪಿ ಎಡವಟ್ಟು
ಮಸ್ಕಿ ವಿಧಾನಸಭಾ ಕ್ಷೇತ್ರದ ವಿಷಯದಲ್ಲಿ ತರಾತುರಿಯ ಹೆಜ್ಜೆಗಳನ್ನಿಟ್ಟು ಯಡಿಯೂರಪ್ಪ ಎಡವಟ್ಟು ಮಾಡಿಕೊಂಡರು. ಇದಕ್ಕೆ ಅಪರಿಮಿತ ವಿಶ್ವಾಸವೇ ಕಾರಣ ಎಂದು ಹೇಳಲಾಗುತ್ತಿದೆ. ಏಕೆಂದರೆ ಪ್ರತಾಪ್ ಗೌಡ ಪಾಟೀಲರು ಗೆದ್ದೇ ಗೆಲ್ಲುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸ, ನಂಬಿಕೆಯಿಂದ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಚುನಾವಣೆ ಸ್ಪೆಷಲಿಸ್ಟ್ ಪ್ರಶಾಂತ್ ಕಿಶೋರ್ ರೇಂಜಿನ ಬಿಲ್ಡಪ್ ಕೊಡಲಾಗಿತ್ತು.
ಯಾವಾಗ ಸ್ಥಳೀಯ ನಾಯಕರನ್ನು ನಿರ್ಲಕ್ಷಿಸಿ ವಿಜಯೇಂದ್ರ ಅವರಿಗೆ ಪ್ರಾತಿನಿಧ್ಯ ನೀಡಲಾಯಿತೋ ಆಗ ಕ್ಷೇತ್ರದ ಹಲವು ನಾಯಕರು ಪಕ್ಷದ ಅಭ್ಯರ್ಥಿಯ ವಿರುದ್ದ ತಿರುಗಿ ಬಿದ್ದರು. ಇದರ ಪರಿಣಾಮ ಈಗ ಯಡಿಯೂರಪ್ಪ ಅವರೇ ಈ ಸೋಲಿನ ಅಪಖ್ಯಾತಿಯನ್ನು ಹೊರಬೇಕಾಗಿದೆ.
ಉಳಿದಂತೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಗೆದ್ದರಾದರೂ ಈ ಗೆಲುವಿಗೆ ಜೆಡಿಎಸ್ ನೀಡಿದ ಸಹಕಾರವೇ ಮುಖ್ಯ ಕಾರಣ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಲ್ಲಮ್ಮ ನಾರಾಯಣರಾವ್ ಅವರಿಗೆ ಗೆಲ್ಲುವ ಅವಕಾಶ ಹೆಚ್ಚಿತ್ತು.