ಕರ್ನಾಟಕ

karnataka

ETV Bharat / city

ಅಪಘಾತ ಪರಿಹಾರ ವಿಚಾರ: ಸಚಿವ ಮಾಧುಸ್ವಾಮಿ-ಶಿವಾನಂದ ಪಾಟೀಲ್ ನಡುವೆ ಜಟಾಪಟಿ - ಅಪಘಾತ ಪರಿಹಾರ ವಿಚಾರಕ್ಕೆ ಸದನ ಕೋಲಾಹಲ

ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವ ಕುರಿತು ನಡೆದ ಚರ್ಚೆ ಮಾತಿನ ಚಕಮಕಿಗೆ ಕಾರಣವಾಯಿತು. ಇದಲ್ಲದೇ, ಕಾಂಗ್ರೆಸ್​ನ ಶಿವಾನಂದ ಪಾಟೀಲ್ ಮತ್ತು ಸಚಿವ ಮಾಧುಸ್ವಾಮಿ ಮಧ್ಯೆ ವೈಯಕ್ತಿಕ ಕಿತ್ತಾಟವೂ ನಡೆಯಿತು.

compensation-issue
ಅಪಘಾತ ಪರಿಹಾರ

By

Published : Mar 23, 2022, 6:27 PM IST

ಬೆಂಗಳೂರು:ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವಲ್ಲಿ ಆದ ತಾರತಮ್ಯ ವಿಚಾರ ಕುರಿತು ನಡೆದ ಚರ್ಚೆ ಸದನದ ಕಾವು ಹೆಚ್ಚಿಸಿತು. ಅಲ್ಲದೇ, ಇದು ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಅವರ ನಡುವೆ ಮಾತಿನ ಜಟಾಪಟಿಗೆ ಕಾರಣವಾಯಿತು. ಕಾಂಗ್ರೆಸ್‌ ಸದಸ್ಯ ಶಿವಾನಂದ ಪಾಟೀಲ್ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಮಾರ್ಚ್ 16 ರಂದು ರಾಮೇಶ್ವರಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ವಾಹನ ಕೂಡ್ಲಿಗಿ ಬಳಿ ಅಪಘಾತಕ್ಕೀಡಾಗಿ 5 ಮಂದಿ ಮೃತಪಟ್ಟಿದ್ದಾರೆ. ಸರ್ಕಾರ ಇದುವರೆಗೂ ಪರಿಹಾರ ನೀಡಿಲ್ಲ. ಆದರೆ, 19 ರಂದು ಪಾವಗಡದಲ್ಲಿ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿದೆ. ಅವರಿಗೂ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ ಜೆಡಿಎಸ್‌ ಸದಸ್ಯ ಲಿಂಗೇಶ್ ಮಾತನಾಡಿ, ನಿನ್ನೆ ಬೇಲೂರಿನಲ್ಲಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿಯಾಗಿ ಐದು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇವರಿಗೂ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಸದಸ್ಯರ ಪ್ರಸ್ತಾಪಗಳಿಗೆ ಉತ್ತರ ನೀಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, ಈ ರೀತಿಯ ಘಟನೆಗಳ ಬಗ್ಗೆ ವರದಿ ತರಿಸಿ ಪರಿಶೀಲಿಸಿ ಪರಿಹಾರ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಪರಿಶೀಲನೆ ಉತ್ತರ ಸರಿಯಲ್ಲ:ಸಚಿವರ ಉತ್ತರದಿಂದ ತೃಪ್ತರಾಗದ ಶಿವಾನಂದ ಪಾಟೀಲ್, ಒಬ್ಬರಿಗೆ ಪರಿಹಾರ ನೀಡಿ, ಮತ್ತೊಬ್ಬರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಸಚಿವರು ಹೇಳುವುದು ಸರಿಯಲ್ಲ. ಇದರಲ್ಲಿ ಪರಿಶೀಲನೆ ನಡೆಸುವುದು ಏನಿದೆ?. ಪರಿಹಾರ ನೀಡಬೇಕು ಎಂದರು. ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದೀರಿ, ಪರಿಶೀಲಿಸುತ್ತೇನೆ ಎಂದು ಶ್ರೀರಾಮುಲು ಪುನರುಚ್ಛರಿಸಿದರು.

ಇದರಿಂದ ಸಿಟ್ಟಾದ ಶಿವಾನಂದ ಪಾಟೀಲ್ ಅವರು, ರಸ್ತೆ ಸುರಕ್ಷಾ ನಿಧಿ ಅಡಿ 470 ಕೋಟಿ ರೂ. ಇದೆ. ನೀವು ಬಳಕೆ ಮಾಡಿರುವುದು 10 ಕೋಟಿ ರೂ. ಮಾತ್ರ ಎಂದು ಹೇಳಿ, ಅದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಯನ್ನು ಸದನದಲ್ಲಿ ಪ್ರದರ್ಶಿಸಿದರು.

ನೀತಿ ರೂಪಿಸಿ- ಕಾಗೇರಿ:ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ರಸ್ತೆ ಗುಂಡಿಗಳನ್ನು ಮುಚ್ಚಲು ಹಣ ಇಲ್ಲ ಎನ್ನುತ್ತಾರೆ. ನೀವು ನೋಡಿದರೆ ಹಣ ಇದೆ ಎನ್ನುತ್ತೀರಿ. ಸಾವುಗಳು ಅನಿರೀಕ್ಷಿತ. ಸಾವು ಬೇರೆ ಬೇರೆಯಾದರೂ ನೋವು ಎಲ್ಲರಿಗೂ ಇದ್ದದ್ದೆ.

ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವ ಸಂಬಂಧ ಒಂದು ನೀತಿ ಮಾಡಿ. ಒಬ್ಬರಿಗೆ ಕೊಡಲ್ಲ, ಇನ್ನೊಬ್ಬರಿಗೆ ಕೊಡುತ್ತೇನೆ ಎಂಬ ಭಾವನೆ ಬೇಡ. ಅನಿರೀಕ್ಷಿತ ಸಾವಿನ ಘಟನೆಗಳು ಸಂಭವಿಸಿದಾಗ ಪರಿಹಾರ ನೀಡುವ ವಿಚಾರಕ್ಕೆ ಸಂಬಂಸಿದಂತೆ ಸರ್ಕಾರ ಒಂದು ನಿಯಮ ಜಾರಿಗೆ ತರುವ ಅಗತ್ಯವಿದೆ. ಒಂದು ಸೂಕ್ತ ತೀರ್ಮಾನ ಮಾಡಿ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.

ಆಗ ಕಾನೂನು ಸಚಿವ ಮಾಧುಸ್ವಾಮಿ ಎದ್ದು ನಿಂತು, ಎಲ್ಲ ಅಪಘಾತಗಳಿಗೂ ಪರಿಹಾರ ನೀಡುತ್ತಾ ಹೋದರೆ ಇದಕ್ಕೆ ಅಂತ್ಯವೇ ಇರುವುದಿಲ್ಲ. ಅಪಘಾತದಲ್ಲಿ ಮೃತಪಟ್ಟವರಿಗೆ ಜೀವವಿಮೆಯಿಂದ ಹಣ ಬರುತ್ತದೆ. ಸರ್ಕಾರ ಎಲ್ಲರಿಗೂ ಪರಿಹಾರ ನೀಡುವುದು ಕಷ್ಟ. ಕೆಲವೆಡೆ ಮಾನವೀಯತೆಯಿಂದ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಮಾತಿಕ ಚಕಮಕಿ:ಈ ವೇಳೆ ಶಿವಾನಂದ ಪಾಟೀಲ್ ಅವರು, ಕಾನೂನು ಸಚಿವರು ಈ ರೀತಿ ಮಾತನಾಡುತ್ತಾರೆ ಎಂದು ಅಂದುಕೊಂಡಿದ್ದೆ ಎಂದು ಹೇಳಿದಾಗ, ಸಿಟ್ಟಿಗೆದ್ದ ಮಾಧುಸ್ವಾಮಿ, ಶಿವಾನಂದ ಪಾಟೀಲ್​ರ ತೆವಲಿಗೆ ನಾನು ಉತ್ತರ ನೀಡಲ್ಲ ಎಂದಾಗ ಸದನದಲ್ಲಿ ಕೋಲಾಹಲ ಉಂಟಾಯಿತು. ಇಬ್ಬರ ನಡುವೆ ಮಾತಿನ ಚಕಮಕಿಗೆ ಜೋರಾಯಿತು. ಇದರಲ್ಲಿ ನನ್ನದೇನಿದೆ. ಜನರ ಹಿತದೃಷ್ಟಿಯಂದ ಪ್ರಶ್ನೆ ಕೇಳಿದ್ದೇನೆ. ಈ ರೀತಿಯೆಲ್ಲಾ ಮಾತನಾಡಬೇಡಿ ಎಂದು ಮಾಧುಸ್ವಾಮಿ ಅವರಿಗೆ ಶಿವಾನಂದ ಪಾಟೀಲ್​ ತಿರುಗೇಟು ನೀಡಿದರು.

ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಮಧ್ಯೆಯೇ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ಪರಿಹಾರ ಕೇಳುತ್ತಿದ್ದಾರೆ. ಕೊಡುತ್ತೇನೆ ಅಥವಾ ಇಲ್ಲ ಎಂದು ಹೇಳಿಬಿಡಿ. ಪಾವಗಡ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಟ್ಟಿದ್ದೀರಿ. ಇವರಿಗೆ ಯಾಕೆ ಕೊಡಲ್ಲ ಎಂದು ಹೇಳಿದಾಗ ಸಚಿವ ಶ್ರೀರಾಮುಲು ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಪುನರುಚ್ಚರಿಸಿದರು.

ಎಲ್ಲದ್ದಕ್ಕೂ ಪರಿಹಾರ ಅಸಾಧ್ಯ:ಬಳಿಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಹಲವು ಬಾರಿ ಅಪಘಾತಗಳಾದಾಗ ಮಾನವೀಯತೆಯ ಮೇಲೆ ಪರಿಹಾರ ಕೊಡಲಾಗುತ್ತದೆ. ಎಲ್ಲ ಅಪಘಾತಗಳಿಗೂ ಪರಿಹಾರ ಕೊಡಬೇಕು ಎಂದರೆ ಅದಕ್ಕೆ ಮಿತಿ ಇರುವುದಿಲ್ಲ.

ಅಪಘಾತಗಳಾದಾಗ ಮೃತಪಟ್ಟವರ ಹಿನ್ನೆಲೆ, ಬಡತನ ಎಲ್ಲವನ್ನು ಗಮನಿಸಿ ಸರ್ಕಾರ ಪರಿಹಾರ ನೀಡುತ್ತದೆ. ಎಲ್ಲ ಅಪಘಾತಗಳಿಗೂ ಪರಿಹಾರ ನೀಡುವುದು ಸರ್ಕಾರಕ್ಕೆ ಕಷ್ಟವಾಗುತ್ತದೆ ಎಂದರು. ಆಗ ವಿಧಾನಸಭಾಧ್ಯಕ್ಷ ಕಾಗೇರಿ, ಈ ಬಗ್ಗೆ ಒಂದು ನೀತಿ ಮಾಡಿ ಎಂದು ಸಲಹೆ ನೀಡಿ ಚರ್ಚೆಗೆ ತೆರೆ ಎಳೆದರು.

ಇದನ್ನೂ ಓದಿ:ಶೇ.40 ಕಮಿಷನ್ ಆರೋಪ ಮೇಲೆ ಚರ್ಚೆಗೆ ಅವಕಾಶ ನಿರಾಕರಣೆ : ಸಿಎಂ ಬೊಮ್ಮಾಯಿ-ಸಿದ್ದರಾಮಯ್ಯ ಜಟಾಪಟಿ

ABOUT THE AUTHOR

...view details