ಬೆಂಗಳೂರು: ಸಾಮಾಜಿಕ ಅಂತರದೊಂದಿಗೆ ಜುಲೈ 6ರಿಂದ ಜಯದೇವ ಆಸ್ಪತ್ರೆಯ ಹೊರ ರೋಗಿಗಳ ವಿಭಾಗ (ಒಪಿಡಿ) ಸೇವೆ ಆರಂಭವಾಗಲಿದೆ.
ಸಾಮಾಜಿಕ ಅಂತರದೊಂದಿಗೆ ಜುಲೈ 6ರಿಂದ ಜಯದೇವ ಆಸ್ಪತ್ರೆ ಒಪಿಡಿ ಸೇವೆ ಆರಂಭ ಜಯದೇವ ಆಸ್ಪತ್ರೆಯ ನಾಲ್ವರಿಗೆ ಪಾಸಿಟಿವ್ ಬಂದ ಹಿನ್ನೆಲೆ ಜೂನ್ 24ರಿಂದ 27ರವರೆಗೆ ಹೊರ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನ ನಿಲ್ಲಿಸಲಾಗಿತ್ತು. ಮತ್ತೆ ಪಾಸಿಟಿವ್ ಕೇಸ್ ದೃಢವಾದ ಹಿನ್ನೆಲೆ ಜುಲೈ 4ರವರೆಗೆ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ತುರ್ತು ಚಿಕಿತ್ಸೆಯ ಅವಶ್ಯಕತೆಯಿದ್ದರೆ ಮಾತ್ರ ಆಸ್ಪತ್ರೆಗೆ ಬರುವಂತೆ ರೋಗಿಗಳಿಗೆ ಮನವಿ ಮಾಡಲಾಗಿತ್ತು.
ಲಾಕ್ಡೌನ್ ಸಂದರ್ಭದಲ್ಲೂ ಒಪಿಡಿ ಬಂದ್ ಮಾಡಿರದ ಆಸ್ಪತ್ರೆ ಆಡಳಿತ ಮಂಡಳಿ, ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ಒಪಿಡಿ ಚಿಕಿತ್ಸೆ ರದ್ದು ಮಾಡಿತ್ತು. ರೋಗಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಟೆಲಿಮೆಡಿಸಿನ್ ಸೇವೆ ಜಾರಿಯಲ್ಲಿತ್ತು.
ಇದೀಗ ಮತ್ತೆ ಜುಲೈ 6ರಿಂದ ಜಯದೇವ ಆಸ್ಪತ್ರೆಯ ಹೊರ ರೋಗಿಗಳ ವಿಭಾಗ (ಒಪಿಡಿ) ಸೇವೆ ಆರಂಭವಾಗಲಿದೆ. ಸಾಮಾಜಿಕ ಅಂತರದೊಂದಿಗೆ ದಿನಕ್ಕೆ 400 ರೋಗಿಗಳಿಗೆ ಸೀಮಿತಗೊಳಿಸಿ ಸೇವೆ ನೀಡಲಾಗುತ್ತದೆ. ತುರ್ತು ಸೇವೆ ದಿನದ 24 ಗಂಟೆಯೂ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.