ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಂಗಳೂರಿಗರಿಗೆ ಹಳ್ಳಿ ಸೊಬಗನ್ನು ಪರಿಚಯಿಸಲು ಪದ್ಮನಾಭನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಜಾತ್ರೆಗೆ ಬುಧವಾರ ತೆರೆ ಬಿತ್ತು.
ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಸತೀಶ್ ರೆಡ್ಡಿ ಎಂ.ಕೃಷ್ಣಪ್ಪ, ಸುಧಾಕರ್, ಎಸ್.ಟಿ.ಸೋಮಶೇಖರ್, ಪ್ರೀತಂಗೌಡ ಅವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭಕ್ಕೂ ಮುನ್ನ ತೆರೆದ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಆಗಮಿದ ಬಿ.ಎಸ್.ಯಡಿಯೂರಪ್ಪ ಅವರು ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದದು ಕಂಡುಬಂತು. ಅಲ್ಲದೆ, ಬಿಎಸ್ವೈ ಕಾರ್ಯಕ್ರಮದಲ್ಲಿ ಬಹಳ ಸಂತೋಷದಿಂದ ಇದ್ದರು.
ಜಾನಪದ ಜಾತ್ರೆ ಸಮಾರೋಪದಲ್ಲಿ ಸಿಎಂ ಮಾತು ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಕಲಾತಂಡಗಳು ಜನರ ಮನ ತಣಿಸಿದವು. ಡೊಳ್ಳು ಕುಣಿತ, ತಮಟೆ, ನಗಾರಿ, ಸಿದ್ಧಿಕುಣಿತ, ಗೀಗಿ ಪದ, ರೇಣುಕಾ ಯಲ್ಲಮ್ಮ ದೇವಿ ಆರಾಧನೆ, ಬುಡಕಟ್ಟು ಜನಾಂಗದವರ ನೃತ್ಯ, ಕಂಸಾಳೆ, ಹೆಣ್ಣು ಮಕ್ಕಳಿಂದ ವಿಶೇಷ ವಾದ್ಯ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಲಾ ತಂಡಗಳಿಂದ ಕಲೆ ಪ್ರದರ್ಶನ ನಡೆಯಿತು.
ರಾಜ್ಯದ 15 ಕಡೆಗಳಲ್ಲಿ ಜಾನಪದ ಜಾತ್ರೆಯನ್ನು ಆಯೋಜಿಸಲಾಗಿದೆ. ಈ ಹಿಂದೆ ಜಾನಪದ ಜಾತ್ರೆ ನಿಂತು ಹೋಗಿತ್ತು. ಗ್ರಾಮೀಣ ಭಾಗದ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಈ ಜಾತ್ರೆಯನ್ನು ಪುನರ್ ಆರಂಭಿಸಲಾಗಿದೆ. ಇದರ ಜೊತೆಗೆ ಹಿರಿಯ ಜಾನಪದ ಕಲಾವಿದರಿಗೆ ಮಾಶಾಸನ ನೀಡುವುದು ಮತ್ತು ಯುವಕಲಾವಿದರಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ.