ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಚುನಾವಣೆ ನಡೆಯಲಿದ್ದು, ಪಕ್ಷ ಬಲವರ್ಧನೆಗಾಗಿ ಜನಸ್ವರಾಜ್ ಸಮಾವೇಶ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.
ಮಲ್ಲೇಶ್ವರಂನ ಭಾವುರಾವ್ ದೇಶಪಾಂಡೆ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಚುನಾವಣೆ ನಡೆಯಲಿದೆ. 25 ಸ್ಥಾನಗಳಿಗೆ ಜನವರಿಯಲ್ಲಿ ಈ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೆಚ್ಚು ಸೀಟ್‌ಗಳನ್ನು ಬಿಜೆಪಿ ಗೆಲ್ಲಬೇಕಿದೆ. ಕಳೆದ ಬಾರಿ 7 ಸೀಟ್ ಬಿಜೆಪಿ ಗೆದ್ದಿತ್ತು, ಈಗ ಹೆಚ್ಚು ಸೀಟ್ ಗೆಲ್ಲಲು ಶ್ರಮ ವಹಿಸುತ್ತೇವೆ. ಹಾಗಾಗಿ ಜನ ಸ್ವರಾಜ್ ಯಾತ್ರೆ ನಡೆಯಲಿದೆ. ನಾಲ್ಕು ತಂಡಗಳಾಗಿ ಮಾಡಿದ್ದು, ನವೆಂಬರ್ 19 ರಿಂದ 23ರ ತನಕ ಜನಸ್ವರಾಜ್ ಸಮಾವೇಶ ನಡೆಯಲಿದೆ ಎಂದು ವಿವರಿಸಿದರು.
ಯಡಿಯೂರಪ್ಪ, ಕಟೀಲ್, ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತಂಡ ಮಾಡಲಾಗಿದ್ದು, ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ನಡೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಸಮಾವೇಶ ಕೈಗೊಳ್ಳಲಾಗುವುದು. ಒಂದು ತಂಡ ದಿನಕ್ಕೆ ಎರಡು ಸಮಾವೇಶಗಳನ್ನು ಮಾಡಲಿದೆ. ಮೊದಲ ಸಮಾವೇಶದಲ್ಲಿ 4 ತಂಡಗಳು ಗ್ರಾಮ ಪಂಚಾಯಿತಿ ಸದಸ್ಯರ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿ ಚಾಲನೆ ನೀಡ್ತಾರೆ.